ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೌಕರರಿಗೆ ತಹಸೀಲ್ದಾರ್ರಿಂದ ಕಿರುಕುಳ; ಸಂಘದ ಆರೋಪ

Mainashree
Updated On : 20 Jan 2014, 10:38 am

ಕ.ಪ್ರ. ವಾರ್ತೆ   ಲಿಂಗಸ್ಗೂರು   ಜ.19
ಸ್ಥಳೀಯ ಕಂದಾಯ ಇಲಾಖೆ ನೌಕರರಿಗೆ ತಹಸೀಲ್ದಾರ್ ವಿನಾಕಾರಣ ಕಿರುಕುಳ, ದೌರ್ಜನ್ಯ ನೀಡುತ್ತಿದ್ದು, ಕೂಡಲೇ ತಹಸೀಲ್ದಾರರನ್ನು ವರ್ಗಾವಣೆ ಮಾಡಬೇಕು ಅಥವಾ ಸೇವೆಯಿಂದ ಅಮಾನತು ಗೊಳಿಸಬೇಕೆಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಒತ್ತಾಯಿಸಿದರು.
ಪಟ್ಟಣದ ನೌಕರರ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಜಿ.ಎಸ್. ಮಹಾಜನ್ ವಿನಾಕಾರಣ ನೀಡುವ ಕುರುಕುಳ, ದೌರ್ಜನ್ಯಕ್ಕೆ ಬೇಸತ್ತು ನೌಕರರು ಸಂಘಕ್ಕೆ ಮನವಿ ಮಾಡಿದ್ದರು. ನೌಕರರ ಹಿತ ಕಾಪಾಡಲು ತಹಸೀಲ್ದಾರರನ್ನು ಭೇಟಿ ಮಾಡಿ ವಿಚಾರಿಸಿದಾಗ ನಾನು ತಾಲೂಕು ದಂಡಾಧಿಕಾರಿ ನಿಮ್ಮ ಮೇಲೆ ಕೇಸು ಮಾಡಿ ಪೊಲೀಸ್ ಕಸ್ಟಡಿಗೆ ಕೊಡುತ್ತೇನೆಂದು ಬೆದರಿಕೆ ಹಾಕಿದ್ದರು.
ಕಾರಣವಿಲ್ಲದೆ ನೋಟಿಸ್: ಕೆಲ ಸಿಬ್ಬಂದಿಗೆ ನೀವು ನೌಕರರ ಸಂಘದ ಅಧ್ಯಕ್ಷರಿಗೆ ವಿಷಯ ತಿಳಿಸಿದ್ದೀರಾ ಎಂದು ಕಾರಣವಿಲ್ಲದೆ ನೋಟಿಸ್ ನೀಡಿದ್ದಾರೆ. ಕೆಲವರಿಗೆ ತಹಸೀಲ್ದಾರ್ ಕಚೇರಿಯಿಂದ ಮಸ್ಕಿ, ಗುರುಗುಂಟಾ ನಾಡ ಕಚೇರಿಗಳಿಗೆ ಎರವಲು ಸೇವೆ ಮೇಲೆ ನಿಯೋಜನೆ ಮಾಡಿದ್ದಾರೆ.
ತಿಂಗಳಿಂದ ವೇತನ ತಡೆ: ಕಂದಾಯ ಇಲಾಖೆಯ ಶಿರಸ್ತೇದಾರ, ಪ್ರಥಮ ಹಾಗೂ ದ್ವಿತಿಯ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ, ಪರಿಚಾರಕರು, ಗ್ರಾಮ ಲೆಕ್ಕಿಗರಿಗೆ ಕೆಲ ದಿನ ಮತ್ತು ಕೆಲ ತಿಂಗಳಿಂದ ವೇತನ ತಡೆ ಹಿಡಿದಿದ್ದಾರೆ. ನೌಕರರು ವರ್ಗಾವಣೆಯಾದರೆ ಎಲ್ಪಿಸಿ, ಎಸ್ಆರ್ಗಳನ್ನು ಕಳುಹಿಸದೆ ಸತಾಯಿಸುತ್ತಾರೆ. ಚುನಾವಣಾ ಖರ್ಚು-ವೆಚ್ಚಗಳ ಬಗ್ಗೆ ಯಾವುದೇ ಒಚರ್ ಕೊಡದೆ ಕ್ಯಾಶ್ಬುಕ್ ಬರೆಯಲು ಹೇಳುತ್ತಾರೆ. ಮಹಿಳಾ ನೌಕರರು ತಹಸೀಲ್ದಾರ್ ಕಿರುಕುಳದಿಂದ ದಿನನಿತ್ಯ ಕಣ್ಣೀರಿಡುತ್ತಿದ್ದಾರೆ ಹಾಗೂ ಲೈಂಗಿಕ ಪ್ರಚೋದನೆ ಶಬ್ದಗಳು ಉತ್ಪತ್ತಿಯಾಗುತ್ತಿವೆ ಎಂದು ದೂರಿದ್ದಾರೆ.
ವರ್ಗಾವಣೆ ಮಾಡಿ: ಕಂದಾಯ ಇಲಾಖೆ ನೌಕರರ ಈ ಎಲ್ಲ ವಿಷಯಗಳ ಕುರಿತು ಸಹಾಯಕ ಆಯುಕ್ತರಿಗೆ ತಿಳಿಸಿದಾಗ ತಹಸೀಲ್ದಾರರನ್ನು ಕರೆಯಿಸಿ ಛೀಮಾರಿ ಹಾಕಿದ್ದಾರೆ. ಜ.8 ರಂದು ನೌಕರರು ನೀಡಿದ ದೂರು ಆಧರಿಸಿ ಜ.10 ರಂದು ಇಲಾಖೆ ನೌಕರರು ಹಾಗೂ ನೌಕರರ ಸಂಘದ ಸಭೆ ಕರೆದು, ಮೌಖಿಕ ಹೇಳಿಕೆ ಪಡೆದು ಜಿಲ್ಲಾಧಿಕಾರಿಗೆ ವರದಿ ಕಳುಹಿಸಿ ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರನ್ನು ಕೆಲಸದಿಂದ ಬಿಡುಗಡೆ ಮಾಡಿ ಬೇರೆಡೆ ನಿಯೋಜಿಸುವಂತೆ ಕೋರಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿ ತಹಸೀಲ್ದಾರ್ ಜಿ.ಎಸ್. ಮಹಾಜನ್ರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಅಥವಾ ಸೇವೆಯಿಂದ ಅಮಾನತುಗೊಳಿಸಬೇಕೆಂದು ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ನಾಯಕ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement