'ವೈಫಲ್ಯ ಸರಿಪಡಿಸುವಲ್ಲಿ ಯುವಕರ ಜಾಗೃತಿ ವೇದಿಕೆ'
ಕ.ಪ್ರ. ವಾರ್ತೆ ರಾಯಚೂರು ಜ.19
ಯುವಕರಲ್ಲಿ ಸ್ಫೂರ್ತಿ ಹೆಚ್ಚಿಸಿ ಹೋರಾಟಗಳ ಮೂಲಕ ರಾಜ್ಯ ಸರ್ಕಾರದ ವೈಫಲ್ಯ ಸರಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಯುವಜನ ಜಾಗೃತಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸಿದ್ರಾಮಪ್ಪ ಸಿರಿಗೇರಿ ತಿಳಿಸಿದರು.
ಇತ್ತೀಚೆಗೆ ಮಾನವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ವೇದಿಕೆಯ ಪದಾಧಿಕಾರಿಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ವೇದಿಕೆ ಸಂಘಟಿಸಲು ಆಗಮಿಸಿದ್ದು, ಯುವ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಿ ಭ್ರಷ್ಟಾಚಾರ ನಿರ್ಮೂಲನೆದೆ 2007ರಲ್ಲಿಯೇ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಹೈ.ಕ.ದಲ್ಲಿ ಯುವ ಶಕ್ತಿಯನ್ನು ಒಂದುಗೂಡಿಸಿ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ವೇದಿಕೆ ಶ್ರಮಿಸುತ್ತದೆ. ನಿಷ್ಟಾವಂತ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರ ನಿಧನಕ್ಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಐಜಿಪಿಯೇ ನೇರ ಹೊಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಯ ಆರೋಗ್ಯ ಸ್ಥಿತಿ ವಿಚಾರಿಸಲಿಲ್ಲ ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದು ದೂರಿದರು.
ಆಯ್ಕೆ: ಮಾನವಿ ತಾಲೂಕು ಪದಾಧಿಕಾರಿಗಳಾಗಿ ಈ ವೇಳೆ ಅಧ್ಯಕ್ಷರಾಗಿ ವಿ. ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿಯಾಗಿ ರಂಗರಾವ್ ಕುಲಕರ್ಣಿ, ಉಪಾಧ್ಯಕ್ಷರಾಗಿ ಪ್ರಹ್ಲಾದ, ರೆಡ್ಡಪ್ಪಗೌಡ ಸಂಗಾಪುರ, ಜಂಟಿ ಕಾರ್ಯದರ್ಶಿಗಳಾಗಿ ಬಿ. ಬಲರಾಮರೆಡ್ಡಿ, ಗಯಾಸುದ್ದೀನ್, ಖಜಾಂಚಿಯಾಗಿ ಸಂತೋಷ ಹೂಗಾರ್ ಅವರು ನೇಮಕಗೊಂಡರು. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಿದ್ರಾಮಯ್ಯಸ್ವಾಮಿ, ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ರತ್ನಯ್ಯ, ಹಂಪನಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಮೇಶ್ವರಿ, ಸಿದ್ದಲಿಂಗಮ್ಮ, ವಿ.ಸಿ. ಸುಧಾಕರರೆಡ್ಡಿ, ರಾಜಾಬಕ್ಷ ಸೇರಿ ಅನೇಕರಿದ್ದರು.