ದೇವದುರ್ಗ; ಚೌಡಯ್ಯ ಜಯಂತಿ ಆಚರಣೆ
ದೇವದುರ್ಗ: ಸಮಾಜದ ಓರೆಕೋರೆಗಳನ್ನು ವಚನಗಳ ಮೂಲಕ ತಿದ್ದುವ ಕಾರ್ಯವನ್ನು ನಿಜಶರಣ ಅಂಬಿಗರ ಚೌಡಯ್ಯ ಮಾಡಿದ್ದಾರೆಂದು ಶಾಸಕ ವೆಂಕಟೇಶ ನಾಯಕ ಹೇಳಿದರು.
ಅವರು ಮಂಗಳವಾರ ತಾಲೂಕು ಆಡಳಿತ ಹಾಗೂ ತಾಲೂಕು ಗಂಗಾಮತ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೂರಾರು ವರ್ಷಗಳ ಹಿಂದೆಯೇ ಜಾತಿ ಭೇದಭಾವ ತೊರೆಯುವ ಕಾರ್ಯ ಅಂಬಿಗರ ಚೌಡಯ್ಯನವರಂಥ ಶರಣರು ಮಾಡಿದ್ದರೆಂದು ಹೇಳಿದರು. ಗಂಗಾಮತ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಆದ್ಯತೆ ನೀಡಬೇಕು. ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಮಾಜದ ಏಳಿಗೆಯಾಗಲು ಸಾಧ್ಯ ಎಂದು ಹೇಳಿದರು.
ಜನವಾಡಾದ ಅಲ್ಲಮ ಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳು ಹಿತವಚನ ನೀಡಿದರು. ಕಸಾಪ ಮಾಜಿ ಅಧ್ಯಕ್ಷ ಎಚ್. ದಂಡಪ್ಪ ಅತಿಥಿ ಉಪನ್ಯಾಸ ನೀಡಿದರು. ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಕೆ. ಜಂಬಣ್ಣ ನಿಲೋಗಲ್, ನಾಗಪ್ಪ ಗಿರಿಣಿ, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ, ರಾಘವೇಂದ್ರ ಕೋಲ್ಕಾರ, ಅಮರೇಶ ಮಾನ್ವಿಕರ, ಪ್ರಭಾಕರ, ಸಾಬಣ್ಣ ಗೂಗಲ್, ವೀರಶೈವ ಸಮಾಜದ ಅಧ್ಯಕ್ಷ ಎ. ಮಲ್ಲಿಕಾರ್ಜುನ, ಬುಡ್ಡನಗೌಡ ಜಾಗಟಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ವಿ.ಎಂ. ಮೇಟಿ ವಕೀಲರು, ತಾ.ಪಂ. ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡ್ಲಗುಂಡ ಸೇರಿದಂತೆ ಅನೇಕರಿದ್ದರು.