ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲು ಗಂಗಾಮತಸ್ಥರಿಗೆ ಸಲಹೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜ.21
ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಗಂಗಾಮತಸ್ಥ ಸಮಾಜದವರು ಸಮಾಜದ ಸಮಗ್ರ ಏಳಿಗೆಗೆ ಪ್ರತಿಯೊಬ್ಬರೂ ಕಲಿಕೆಗೆ ಆಸಕ್ತಿ ವಹಿಸಬೇಕು. ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವಂತೆ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಸಲಹೆ ನೀಡಿದರು.
ಅವರು ನಗರದ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತತ್ವಾದರ್ಶ: ಜ್ಞಾನಿಯಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜದ ಶೋಷಿತ ವರ್ಗ, ದಬ್ಬಾಳಿಕೆ ಹಾಗೂ ಬಹಿಷ್ಕಾರಕ್ಕೊಳಗಾದವರ ಪರ ದನಿಯಾಗಿದ್ದರು. ಅಂಥವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಮಾಡಿದ್ದಾರೆ. ಅವರ ತತ್ವಾದರ್ಶ ಎಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು.
ಸರ್ಕಾರದಿಂದ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಗುತ್ತಿದೆ. ಆದರೆ ಭಾವಚಿತ್ರದ ಮೆರವಣಿಗೆಗೆ ಹೆಚ್ಚು ಸಮಯ ಮೀಸಲಿಡುವ ಬದಲು ಚೌಡಯ್ಯನವರ ವಿಚಾರಗಳ ಕುರಿತು ಸಮಗ್ರ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡುವುದು ಹೆಚ್ಚು ಸೂಕ್ತ. ಶರಣರ ವಚನ ಸಾಹಿತ್ಯವನ್ನು ಅರಿಯುವ ಮೂಲಕ ಸಮಾಜದ ಜಾಗೃತಿಗೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜದ ಎಲ್ಲ ಜಾತಿ ಜನಾಂಗದವರಿಗೆ ಸೇರಿದ್ದು, ಅವರು ಕೇವಲ ಗಂಗಾಮತಸ್ಥರಿಗೆ ಸೀಮಿತರಲ್ಲ. ಅವರ ತತ್ವದಾರ್ಶಗಳು ಸಮಾಜಕ್ಕೆ ತಿಳಿಯಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ ಎಂದು ಹೇಳಿದರು.
ಪುಸ್ತಕಕ್ಕೆ ಸೀಮಿತ: 12ನೇ ಶತಮಾನದಲ್ಲಿದ್ದ ಶರಣರು ತೋರಿದ ಮಾರ್ಗದಲ್ಲಿ ಎಲ್ಲರೂ ಎಷ್ಟರಮಟ್ಟಿಗೆ ಸಾಗುತ್ತಿದ್ದೇವೆ ಎಂಬ ವಿಚಾರದ ಬಗ್ಗೆ ಆತ್ಮಾವಲೋಕನ ಅವಶ್ಯಕ. ಎಲ್ಲರಲ್ಲಿ ತಮ್ಮ ಜಾತಿಗಳ ಬಗ್ಗೆ ಸ್ವಾಭಿಮಾನವಿರುವುದು ಒಳ್ಳೆಯದು. ಆದರೆ ದುರಭಿಮಾನ ಬೆಳೆಸಿಕೊಳ್ಳುವುದು ಸರಿಯಲ್ಲ. ಶರಣರ ವಚನಗಳು ಮತ್ತು ಅವರ ಬದುಕಿದ ರೀತಿ ಇಂದು ಕೇವಲ ಪುಸ್ತಕಕ್ಕೆ ಸೀಮಿತವಾಗಿವೆ. ಆಚರಣೆಗೆ ಬಂದಿದ್ದು ತೀರಾ ಕಡಿಮೆ ಎಂದು ವಿಷಾದಿಸಿದರು.
ಗಂಗಾಮತ ಸಮಾಜದವರು ರಾಜ್ಯದಲ್ಲಿ ತೀರಾ ಹಿಂದುಳಿದಿದ್ದು, ಜಿಲ್ಲೆಯಲ್ಲಿ ಒಟ್ಟು 3ಲಕ್ಷ ಗಂಗಾಮತ ಸಮಾಜದವರಿದ್ದು, ರಾಯಚೂರು ತಾಲೂಕಿನಲ್ಲಿ 1.5ಲಕ್ಷ ಜನರಿದ್ದಾರೆ. ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆಯಿದ್ದು, ಸರ್ಕಾರದಿಂದ ಗಂಗಾಮತ ಸಮಾಜದ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುವ ಅವಶ್ಯಕತೆಯಿದೆ ಎಂದರು.
ಸನ್ಮಾನ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಂಗಾಮತ ಸಮಾಜದವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ಎಸ್ಪಿ ಎಂ.ಎನ್. ನಾಗರಾಜ, ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಡಿಡಿಪಿಐ ರಾಮಾಂಜನೇಯ, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷೆ ಪದ್ಮಾ, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ಉಪನ್ಯಾಸಕ ರಾಮಸ್ವಾಮಿ ನುಲಿ, ದೊಡ್ಡಮಲ್ಲೇಶ, ಜಿಂದಪ್ಪ, ರಾಮು, ಹರೀಶ್ ನಾಡಗೌಡ, ಬಾಬುರಾವ್, ಕಡಗೋಳ ಆಂಜಿನೇಯ್ಯ ಸೇರಿ ಅನೇಕರಿದ್ದರು.
ಇದಕ್ಕೂ ಮುನ್ನ ನಗರದ ಬಿಆರ್ಬಿ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪುತ್ಥಳಿಗೆ ನಗರದ ಗಣ್ಯರು, ಗಂಗಾಮತ ಸಮಾಜದವರು ಸೇರಿದಂತೆ ಜಿಲ್ಲಾಡಳಿತದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅಂಬಿಗರ ಚೌಡಯ್ಯನವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ರಂಗಮಂದಿರ ತಲುಪಿತು.