ಸುದ್ದಿ ಸಂಕ್ಷೇಪ
ಗಣರಾಜ್ಯೋತ್ಸವ: ಚಿತ್ರಕಲಾ ಸ್ಪರ್ಧೆ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮೀಣ ಮಟ್ಟದ ಎಲ್ಲಾ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ವಿಭಾಗದ ಸೃಜನಶೀಲ ವೇದಿಕೆಯಿಂದ ಗ್ರಾಮೀಣ ಚಿತ್ರ ಚಿಗುರು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇವಸೂಗೂರು ಗ್ರಾಮದ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 17 ವಿವಿಧ ಶಾಲೆಗಳ 1050 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕಿನ ವಿವಿಧ ಶಾಲೆಯ 10 ಜನ ಚಿತ್ರಕಲಾ ಶಿಕ್ಷಕರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮುಖ್ಯಗುರು ರಾಧಾ ಕುಮಾರಿ, ಚಿತ್ರಕಲಾ ಶಿಕ್ಷಕ ಮಹೇಶ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಪಿ.ಎನ್. ಕುಮಾರ್, ವೀರಭದ್ರಪ್ಪ, ರವಿ ಇದ್ದರು.
ನಾಳೆ ಸಮಿತಿ ಸಭೆ
ರಾಯಚೂರು: ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚಿಸಲು ಜ.23ರಂದು ನಗರದಲ್ಲಿ ಸಭೆ ಕರೆಯಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಅನುಷ್ಟಾನ ಕುರಿತು ಜಿಲ್ಲಾ ಸಮಿತಿ ಸಭೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
27ಕ್ಕೆ ತಾಪಂ ಸಭೆ
ರಾಯಚೂರು: ಇಲ್ಲಿನ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಜ.27ರಂದು ಕರೆಯಲಾಗಿದೆ ಎಂದು ತಾಪಂ ಇಒ ಕಚೇರಿ ತಿಳಿಸಿದೆ. ತಾಪಂ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದೆ.
ಇವ್ರು ಹಿಂಗೆ ಕಣ್ರೀ
ನಾವ್ ಜೋಪಾನ...
ಈಗ ಪಕ್ಷ ಬೇರೆ ಬೇರೆ ಇರಬಹುದು. ಹಿಂದೆ ನಾವೆಲ್ಲಾ ಒಟ್ಟಾಗಿ ಇದ್ದೆವು. ಹಂಗಾಗಿ ನಾನ್, ನೀನ್ ಏಕೆ ಸುಮ್ಮನೆ ಇವರ್ ಮುಂದೆ ಎಲ್ಲಾ ಮಾತನಾಡಬೇಕ್. ಆಯ್ತು... ಬಿಡಿ. ಸಾಹೇಬರೇ... ಹೀಗೆ ಹಾಸನ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಲೋಕೋಪಯೋಗಿ ಮಂತ್ರಿ ಡಾ.ಎಚ್.ಸಿ. ಮಹದೇವಪ್ಪ ಮತ್ತು ಜೆಡಿಎಸ್ ಮುಖಂಡ ಎಚ್. ಡಿ. ರೇವಣ್ಣ ಜುಗಲ್ ಬಂದಿ ಹಾಡುತ್ತಿರಲು ನಾನಾ ಇಲಾಖಾಧಿಕಾರಿಗಳು ಮತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಬಾಯಿ ಮೇಲೆ ಬೆರಳ್ ಇಟ್ಟಕ್ಕಂಡ್ ಮಂತ್ರಿ, ರೇವಣ್ಣ ಪರಸ್ಪರ ಹೊಗಳಿಕೊಂಡರೇ ಹೆಂಗೆ ... ಎಂದು ಅಚ್ಚರಿಗೊಂಡರು. ಅವರಿಬ್ಬರ ಜುಗಲ್ಬಂದಿ ಹೆಂಗಿತ್ತೆಂದರೆ.... ರೇವಣ್ಣ... ನಿನ್ ಬಗ್ಗೆ ಅಭಿವೃದ್ಧಿ ವಿಚಾರದಲ್ಲಿ ದುಸರಾ ಮಾತನಾಡಗಿಂಲ್ಲ ಬಿಡು. ನನಗೇನಾದರೂ ಸರ್ಕಾರಿ ದಾಖಲೆ ಬೇಕಾದ್ರೆ ನೀನ್ ಕೇಳ್ತೀನಿ. ಅಥವಾ ನನ್ನ ಬಳಿ ಯಾರಾದ್ರೂ ದಾಖಲೆ ಕೇಳ್ಕಂಡ್ ಬಂದ್ರೆ.. ರೇವಣ್ಣಂತಕೆ ಹೋಗು ಅಂತ ಹೇಳಿ ಕಳೀಸ್ತೀನಿ... ನಾನು- ನೀನು ಒಂದಾಗಿ ಕೆಲ್ಸ ಮಾಡಿದ್ದೇವೆ. ಹೋರಾಟದ ರಾಜಕಾರಣ ಮಾಡಿ ಅಧಿಕಾರ ಪಡೆಯೋದು ನಮಗೆ ಗೊತ್ತಿದೆ. ಅಲ್ವಾ.. ರೇವಣ್ಣ ಎಂದು ಮಹಾದೇವಪ್ಪ ಹೇಳಿದರು. ಅದಕ್ಕೆ ರೇವಣ್ಣ... ಸಾಹೇಬ್ರೆ. ನಾನು- ನೀವು ಒಟ್ಟಾಗಿ ಕೆಲ್ಸ ಮಾಡ್ತೀವಿ. ಅದಕ್ಕೆ ಇವತ್ತು ಕರ್ನಾಟಕ ಉಳ್ಕಂಡೈತೆ. ಸರ್ಕಾರದ ಬೀರು ಕೀ ಕೈ ಸರ್ಕಾರದ ಬಳಿ ಒಂದಿದ್ದರೇ, ನನತ್ರದೇ ಒಂದು ಕೀ ಇದೆ ಎಂದರು. ಇವರಿಬ್ಬರು ಹೀಗೆ ಮುಖಸ್ತುತಿ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ಅಧಿಕಾರಿಗಳು, ಸಭೆ ನಂತರ.. ಇವ್ರೂ ಹಿಂಗೆ ಕಣ್ರೀ.. ಒಳಗೊಳಗೆ ಚೆನ್ನಾಗಿ ಇರ್ತಾರೆ. ನಾವ್ ಜೋಪಾನವಾಗಿ ಇರಬೇಕು ಎಂದು ತಮ್ಮ ಹುಷಾರು ತನವನ್ನು ಮರೆದರು.
ಮೃದುವಾದ ಹರಿತ ನಾಲಗೆ!
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಿದರೆ ಸರಿಯಾಗಿ ಉತ್ತರಿಸದೆ, ಮತ್ತೆ ಪ್ರಶ್ನಿಸಲು ಅವಕಾಶ ನೀಡದೆ ಪತ್ರಕರ್ತರನ್ನೇ ಯಾಮರಿಸುತ್ತಿದ್ದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಈಗ ಮೃದುವಾಗಿದ್ದಾರೆ. ಈ ದಿಢೀರ್ ಬೆಳವಣಿಗೆ ಮಾಧ್ಯಮ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಈಚೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪೂಜಾರಿ ಮಾಧ್ಯಮದವರ ಎಲ್ಲ ಪ್ರಶ್ನೆಗೆ ಸಾವಧಾನದಿಂದ ಉತ್ತರಿಸಿದರು. ನುಣುಚಿಕೊಳ್ಳುವ ಪ್ರಯತ್ನಕ್ಕೆ ಕಡಿವಾಣ ಹಾಕಲು ಯತ್ನಿಸಿದರು. ಪ್ರಶ್ನೆ ಕೇಳುವವರನ್ನು ಕಂಡರಾಗದ ಪೂಜಾರಿ, ಈ ಬಾರಿ ಆ ಆಂಗ್ಲ ಪತ್ರಕರ್ತರೊಬ್ಬರ ಬೆನ್ನುತಟ್ಟಿ, ಚೆನ್ನಾಗಿ ಪ್ರಶ್ನೆ ಕೇಳಿದ್ದೀರಿ ಎಂದು ಶಹಬ್ಬಾಸ್ಗಿರಿ ನೀಡಿದ್ದರು. ಪೂಜಾರಿಯ ಈ ವರಸೆ ಬದಲಾಗಲು ಕಾರಣ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದು. ಎಲ್ಲದಕ್ಕಿಂತ ಮಿಗಿಲಾಗಿ ಈವರೆಗೆ ಪೂಜಾರಿ ಸ್ಪರ್ಧೆಗೆ ಯಾರೂ ಎದುರಿಲ್ಲ ಎನ್ನಲಾಗಿತ್ತು. ಯಾವಾಗ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹೆಸರು ಕೇಳಿಬರತೊಡಗಿತೋ, ಅಲ್ಲಿಂದ ಪೂಜಾರಿ ಮಾಧ್ಯಮದವರ ಜತೆ ಸೈಲೆಂಟಾಗಿದ್ದಾರೆ.