ದಲಿತನ ಹತ್ಯೆಗೆ ಖಂಡನೆ; ಸಿಬಿಐಗೆ ವಹಿಸಲು ಒತ್ತಾಯ
ಲಿಂಗಸ್ಗೂರು,: ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ ಚೌಡೇಶ್ವರಿ ಜಾತ್ರೆ ಸಮಯದಲ್ಲಿ ದಲಿತರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆ ಘಟನೆಯಲ್ಲಿ ದಲಿತ ವ್ಯಕ್ತಿ ಮೃತಪಟ್ಟಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ ಮುಖಂಡ ಕುಪ್ಪಣ್ಣ ಹೊಸಮನಿ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ಯಾಕೋಳೂರು ಗ್ರಾಮದ ಚೌಡೇಶ್ವರಿ ಯಾತ್ರೆ ಪ್ರಯುಕ್ತ ಸ್ವಾಗತ ಕೋರುವ ಬ್ಯಾನರ್ಗಳ ವಿಷಯಕ್ಕೆ ಸಂಬಂಧಿಸಿ ಗ್ರಾಮದ ದಲಿತರು ಹಾಗೂ ಸವರ್ಣೀಯರ ಮಧ್ಯೆ ಘರ್ಷಣೆ ಉಂಟಾಗಿದೆ. ಈ ವೇಳೆ 12 ಜನ ದಲಿತ ಯುವಕರಿಗೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಕರೆದ ಶಾಂತಿ ಸಭೆಗೆ ಆಗಮಿಸುತ್ತಿದ್ದ ದೇವೇಂದ್ರಪ್ಪ ಭೀಮಪ್ಪ ದಳಪತಿ ಎಂಬುವರ ಮೇಲೆ ಸವರ್ಣೀಯರ ಗುಂಪು ಏಕಾಏಕಿ ಹಲ್ಲೆ ನಡೆಸಿ ಹತ್ಯೆಗೆ ಕಾರಣರಾಗಿದ್ದಾರೆ. ದೇವೇಂದ್ರಪ್ಪ ಹತ್ಯೆ ತಡೆಯುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಲಿಂಗಸ್ಗೂರು ಬಂದ್ ಎಚ್ಚರಿಕೆ: ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ ಜಮೀನು ಹಾಗೂ 25 ಲಕ್ಷ ಪರಿಹಾರ ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 10 ಲಕ್ಷ ಪರಿಹಾರ ನೀಡಬೇಕು. ಎಲ್ಲ ದಲಿತ ಕೇರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾದ ಯಾದಗಿರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅಮಾನತು ಮಾಡಬೇಕು. ಈಶಾನ್ಯ ವಲಯ ಐಜಿಪಿಯನ್ನು ಸೇವೆಯಿಂದ ವಜಾಗೊಳಿಸಬೇಕು. ಘಟನೆಯ ಕುರಿತು ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಲಿಂಗಸ್ಗೂರು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನಾಗರಾಜ ಮಾಳೆ, ಹುಲಗಪ್ಪ ಕೆಸರಟ್ಟಿ, ಗ್ಯಾನಪ್ಪ ಕಟ್ಟಿಮನಿ, ದುರಗಪ್ಪ ಅಗ್ರಹಾರ, ಹಾಜಪ್ಪ ಕರಡಕಲ್, ಪ್ರೇಮಜೀವಿ, ಹುಲಗರಪ್ಪ ಕುಣಿಕೆಲ್ಲೂರು ಸೇರಿದಂತೆ ಇನ್ನಿತರರು ಇದ್ದರು.