ದಲಿತರ ಮೇಲೆ ದೌರ್ಜನ್ಯ: ಧರಣಿ
ಸಿಂಧನೂರು: ಯಾದಗಿರಿ ಜಿಲ್ಲೆ ಕನ್ಯಾಕೋಳ್ಳೂರು ಮತ್ತು ಕಡೆಚೂರ್ ಗ್ರಾಮಗಳಲ್ಲಿ ನಡೆದಿರುವ ದಲಿತರ ಮೇಲೆ ದೌರ್ಜನ್ಯವನ್ನು ಖಂಡಿಸಿ ಆರೋಪಿಗಳನ್ನು ಗಡಿಪಾರು ಮಾಡಲು ಒತ್ತಾಯಿಸಿ ತಾಲೂಕಿನ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಲಾಯಿತು. ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆರ್. ಅಂಬ್ರೂಸ್ ಮಾತನಾಡಿ, ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಂತವರಿಗೆ ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು. ಯಾದಗಿರಿ ಜಿಲ್ಲಾದ್ಯಂತ ದಲಿತರ ಮತ್ತು ಮಾದಿಗ ಜನಾಂಗದ ಮೇಲೆ ದೌರ್ಜನ್ಯ ಮತ್ತು ದಲಿತರ ಕೊಲೆ ಖಂಡಿಸಿ ಆರೋಪಿಗಳನ್ನು ತಕ್ಷಣವೇ ಗಡಿಪಾರು ದಲಿತರಿಗೆ ಸೂಕ್ತವಾದ ಸ್ಥಾನ- ಮಾನ ನೀಡಬೇಕು. ದಲಿತರ ಹಕ್ಕು ಮತ್ತು ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಆರ್. ಬೋನ್ ವಂಚರ್, ಚೌರಪ್ಪ ಜವಳಗೇರಾ, ಪಂಪಾಪತಿ ಗುಡುದೂರು, ನಾಗರಾಜ ಬೊಮ್ಮನಾಳ, ವೀರಭದ್ರಪ್ಪ ಮಲ್ಲಾಪೂರ, ಮಹಾದೇವ ಧುಮತಿ, ಚಿಟ್ಟಿಬಾಬು, ಅಮರೆಶ ಗಿರಿಜಾಲಿ, ಜಾನಪ್ಪ ಜವಳಗೇರಾ, ನಾರಾಯಣಕಿಲ್ಲೇದ್ ಮತ್ತಿತರರು ಭಾಗವಹಿಸಿದ್ದರು.
ರಸ್ತೆ ಕಾಮಗಾರಿ ಕಳಪೆ; ಆರೋಪ
ರಾಯಚೂರು: ಮಾನವಿ ತಾಲೂಕಿನ ಕುರ್ಡಿ ಗ್ರಾಪಂ ವ್ಯಾಪ್ತಿಯ ಕುರ್ಡಿ ಗ್ರಾಮದಲ್ಲಿ ಎಸ್ಟಿಪಿ ಯೋಜನೆ ಅಡಿ ಎಸ್ಟಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ದಲಿತ ವಿಮೋಚನಾ ಸೇನೆ ಆರೋಪಿಸಿದೆ.ಈ ಕುರಿತು ಕರ್ನಾಟಕ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ನಿಗಮದ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಗ್ರಾಮದ ಎಸ್ಟಿ ಜನಾಂಗದವರ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಹಳೆಯ ರಸ್ತೆಯನ್ನು 2-3 ಇಂಚುವರೆಗೆ ಕಿತ್ತು ಹಾಕಿ ಹೊಸ ರಸ್ತೆ ನಿರ್ಮಿಸಲಾಗಿದೆ ಎಂದು ದೂರಿದರು.ಕಳಪೆ ಗುಣಮಟ್ಟದಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಕಾರಣ ಕೂಡಲೇ ಅಕ್ರಮಕ್ಕೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಮಾನವಿ ತಾಲೂಕು ಅಧ್ಯಕ್ಷ ರಾಜಕುಮಾರ, ಜಯರಾಜ್, ಖಾಜಣ್ಣ, ಚಿನ್ನಪ್ಪ, ಪ್ರವೀಣ್ ಸೇರಿ ಅನೇಕರಿದ್ದರು.
ರಸ್ತೆ ಧೂಳು
ತಂದಿತು ಗೋಳು
ಸಿಂಧನೂರು: ತಾಲೂಕಿನ ವಳಬಳ್ಳಾರಿ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು, ಇದರಿಂದ ಧೂಳು ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾಗರಾಜ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು. ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಧೂಳು ತಪ್ಪಿಸಲು ಪ್ರತಿನಿತ್ಯ ನೀರು ಸಿಂಪರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಗುಮಾಸ್ತರಿಗೆ ಎನ್ಪಿಎಸ್ ಸಭೆ
ಸಿಂಧನೂರು: ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಎಪಿಎಂಸಿ ಯಾರ್ಡ್ ಗುಮಾಸ್ತರಿಗಾಗಿ ರಾಷ್ಟ್ರೀಯ ನಿವೃತ್ತಿ ಪಿಂಚಣಿ ವ್ಯವಸ್ಥೆಯ ಯೋಜನೆ (ಎನ್ಪಿಎಸ್) ಮಾಹಿತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಗುಮಾಸ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಡಿ.ಬಾದಾಮಿ ಮಾತನಾಡಿ, ಗುಮಾಸ್ತರ ಜೀವನ ಭದ್ರತೆಗಾಗಿ ಹಾಗೂ ಅವರ ಕೆಲಸದ ನಿವೃತ್ತಿಯ ನಂತರ ಯಾರ ಮೇಲೂ ಅವಲಂಬನೆಯಾಗದೆ ಸ್ವಾವಲಂಬಿಯಾಗಿ ಬದುಕುವ ವ್ಯವಸ್ಥೆಯನ್ನು ಕಲ್ಪಿಸುವುದೇ ಈ ಯೋಜನೆಯ ಉದ್ದೇಶ. ಗುಮಾಸ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 50 ಜನ ಗುಮಾಸ್ತರು ಎನ್ಪಿಎಸ್ ಯೋಜನೆಯ ಸದಸ್ಯತ್ವ ಪಡೆದರು. ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ಸಾಯಿನಾಥ, ಎಇಒ ಶಿವಾನಂದ, ಅಧಿಕಾರಿ ಶರಣಕುಮಾರ, ಸಂಜೀವ, ಖಾಜಿಮಲಿಕ್ ವಕೀಲ, ನಬಿಸಾಬ ವಕೀಲ, ಎಪಿಎಂಸಿ ಯಾರ್ಡ್ ಗುಮಾಸ್ತರ ಸಂಘದ ಅಧ್ಯಕ್ಷ ನಿರುಪಾದಯ್ಯ ಸ್ವಾಮಿ, ಕಂಠೆಪ್ಪ ಮೆಂಟಗೇರಿ, ಬಸವರಾಜ ಸಿದ್ರಾಂಪುರ, ಲಿಂಗರಾಜ ಕಂಬಳಿ, ಧರ್ಮರಾಜ್, ಮಲ್ಲಿಕಾರ್ಜುನ ಗುಡಿಹಾಳ, ಬೀರಪ್ಪ, ಗುಂಡಪ್ಪ ಕುರಿ, ಶರಣಪ್ಪ ಮಾವಿನಬಾವಿ, ಬಿ. ರಘು, ಶರಣಪ್ಪ ತಾವರಗೇರಿ, ಖಾಸಿಂ ತಾವರಗೇರಿ ಮತ್ತಿತರರು ಇದ್ದರು.
ಸೌಂಡ್ ಅಂಡ್ ಲೈಟ್ ಅಸೋಸಿಯೇಷನ್ ಉದ್ಘಾಟನೆ
ರಾಯಚೂರು: ನಗರದ ರಂಗಮಂದಿರದಲ್ಲಿ ಈಚೆಗೆ ಸೌಂಡ್ ಮತ್ತು ಲೈಟ್ ವೆಲ್ಫೇರ್ ಅಸೋಸಿಯೇಷನ್ ಸಂಘಟನೆಯ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು.
ಸಂಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಉದ್ಘಾಟಿಸಿ, ಅಸೋಸಿಯೇಷನ್ ವತಿಯಿಂದ ಇಂಥ ವೃತ್ತಿಯಲ್ಲಿರುವವರ ಹಿತಕ್ಕೆ ದುಡಿಯುವಂತೆ ಕರೆ ನೀಡಿದರು.
ಸಾನಿಧ್ಯವನ್ನು ಕಿಲ್ಲೆಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಶಂಶಾಲಂ ದರ್ಗಾದ ಸೈಯದ್ ಅಶ್ರಫ್ ರಾಜಹುಸೇನಿ ಸಜ್ಜಾದೇ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಅನ್ವರ್ ಖಾನ್, ಸಂಘದ ಪದಾಧಿಕಾರಿಗಳಾದ ತುಳಜಾರಾಂ ಸೂರ್ಯವಂಶಿ, ಲೂಕಪ್ಪ, ಅನ್ವರ್ ಅಲಿ ಇತರರಿದ್ದರು.