ಬ್ಲಾಕ್ ಮಟ್ಟದ ಕಲಿಕೋತ್ಸವಕ್ಕೆ ಚಾಲನೆ
ರಾಯಚೂರು: ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕಲಿಕೋತ್ಸವ ಆಯೋಜಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಶ್ರಮಿಸುವಂತೆ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಕರೆ ನೀಡಿದರು.
ಅವರು ನಗರದ ಲಿಟಲ್ ಏಂಜೆಲ್ಸ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಬ್ಲಾಕ್ ಮಟ್ಟದ ಕಲಿಕೋತ್ಸವ ಸಮಾರಂಭ ಉದ್ಘಾಟಿಸಿ, ಕಲಿಕೋತ್ಸವವನ್ನು ಹಬ್ಬದ ಮಾದರಿಯಲ್ಲಿ ಆಚರಿಸಬೇಕು. ಸರ್ಕಾರವು ಶಿಕ್ಷಣದ ಗುಣಮಟ್ಟ ಹೆಚ್ಚಿ ಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಈ ಕಾರ್ಯಕ್ರಮದ ಸಮರ್ಪಕ ಜಾರಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಮಾಜಿ ಎಂಎಲ್ಸಿ ಶಂಕ್ರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅನೇಕರು ಇಂದು ಉನ್ನತ ಸ್ಥಾನಕ್ಕೇರಿದ್ದಾರೆ. ಪಾಲಕರು ಮಕ್ಕಳನ್ನು ಸರ್ಕಾರದ ಶಾಲೆಗೆ ಸೇರ್ಪಡೆಗೊಳಿಸಿ ಅವರ ಭವಿಷ್ಯ ಬೆಳಗುವಂತೆ ಮನವಿ ಮಾಡಿದರು.
ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ನಗರಸಭೆ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷ ಪದ್ಮಾವತಿ, ತಾಪಂ ಉಪಾಧ್ಯಕ್ಷೆ ಜಯಮ್ಮ, ಮುಖ್ಯಗುರು ರೂಪಾ, ಬಿಇಒ ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.