ಸುದ್ದಿಸಂಕ್ಷೇಪ
ಇಂದು ಬೆಂಗಳೂರು ಚಲೋ
ರಾಯಚೂರು: ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.23 ರಂದು ಬೆಂಗಳೂರು ಚಲೋ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ರಾಜ್ಯ ಗ್ರಾಪಂ ನೌಕರರ ಸಂಘ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಮಲ್ಲಪ್ಪ ಹೂಗಾರ್ ಮತ್ತಿತರರು, ಗ್ರಾಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 50 ಸಾವಿರ ನೌಕರರಿಗೆ ಕನಿಷ್ಟ ವೇತನ ನೀಡಬೇಕು. ಹೊರಗುತ್ತಿಗೆ ಪದ್ಧತಿಯಲ್ಲಿ ನೇಮಕಾತಿ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.23 ರಂದು ಬೆಂಗಳೂರು ಚಲೋ ಹೋರಾಟ ಆಯೋಜಿಸಲಾಗಿದೆ ಎಂದಿದ್ದಾರೆ.
ಎಸ್ಮಾ: ಇಂದು ಪ್ರತಿಭಟನೆ
ರಾಯಚೂರು: ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯನ್ನು (ಎಸ್ಮಾ) ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜ.23 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ತಿಳಿಸಿದೆ.ಸಿಐಟಿಯು ಕರೆಯ ಮೇರೆಗೆ ಜ.23 ರಂದು ಎಸ್ಮಾ ಕಾಯಿದೆ ವಿರೋಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಚಲೋ ಪ್ರತಿಭಟನೆ ಆಯೋಜಿಸಿದ್ದು, ಅಕ್ಷರ ದಾಸೋಹ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ಜೆ.ಎಂ. ಚನ್ನಬಸಯ್ಯ ಮತ್ತಿತರರು ತಿಳಿಸಿದ್ದಾರೆ.
ಸಿಂಗನೋಡಿಯಲ್ಲಿ ಇಂದು ಧರಣಿ
ರಾಯಚೂರು: ಉದ್ಯೋಗ ಖಾತ್ರಿ ಯೋಜನೆ ಅಡಿ 100 ದಿನಗಳ ಕೆಲಸ ಕಡ್ಡಾಯ ನೀಡಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದಿಂದ ಜ.23 ರಂದು ತಾಲೂಕಿನ ಸಿಂಗನೋಡಿ ಗ್ರಾಪಂ ಎದುರು ಧರಣಿ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘವು, ಖಾತ್ರಿ ಯೋಜನೆಯಲ್ಲಿ 100 ದಿನಗಳ ಕೆಲಸ ಕಡ್ಡಾಯವಾಗಿ ನೀಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಬಡ ಕೂಲಿಕಾರರು ಮನೆ ನಿರ್ಮಿಸಿಕೊಂಡಿದ್ದರೂ ಅವರಿಗೆ ಹಣ ಪಾವತಿಸದ ಕ್ರಮ ವಿರೋಧಿಸಿ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದೆ.ಜ.23ರಂದು ಬೆಳಗ್ಗೆ 11ಕ್ಕೆ ಸಿಂಗನೋಡಿ ಗ್ರಾಪಂನ ಬಾಪೂರು ಮತ್ತು ಮಂಡಲಗೇರಾ ಸೇರಿ ಮತ್ತಿತರೆ ಗ್ರಾಮಗಳ ಕೂಲಿಕಾರರು ಧರಣಿ ನಡೆಸಲಿದ್ದಾರೆಂದು ಸಂಘಟನೆಯ ಪ್ರಮುಖರಾದ ಕರಿಯಪ್ಪ ಅಚ್ಚೊಳ್ಳಿ, ಬಸವರಾಜ ಚಂದ್ರಬಂಡಾ, ಸತ್ಯಪ್ಪ ಬಾಪೂರು, ಮುದ್ದಪ್ಪ ಉಂಡ್ರಾಳದೊಡ್ಡಿ ಸೇರಿ ಅನೇಕರು ತಿಳಿಸಿದ್ದಾರೆ.