ಆಂಧ್ರದಿಂದ ಬಚಾವತ್ ಐತೀರ್ಪಿನ ಉಲ್ಲಂಘನೆ
ಕ.ಪ್ರ. ವಾರ್ತೆ ರಾಯಚೂರು ಜ.23
ತುಂಗಭದ್ರಾ ಮಂಡಳಿಯಲ್ಲಿನ ಆಂಧ್ರಪ್ರದೇಶದ ಅಧಿಕಾರಿಗಳು ಬಚಾವತ್ ಐತೀರ್ಪು ಉಲ್ಲಂಘಿಸಿ ತಮ್ಮ ರಾಜ್ಯಕ್ಕೆ ನೀರು ಹರಿಸುತ್ತಿದ್ದು, ಕೂಡಲೇ ನದಿಗೆ ನೀರು ಹರಿಸುವುದನ್ನು ನಿಲುಗಡೆ ಮಾಡುವಂತೆ ರೈತ ವೇದಿಕೆಯ ಮುಖಂಡ ಹನುಮನಗೌಡ ಬೆಳಗುರ್ಕಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಆಂಧ್ರ ತನ್ನ ಪಾಲಿನ ನೀರನ್ನು ಅವಧಿಗೂ ಮುನ್ನವೇ ನದಿಯ ಮೂಲಕ ಪಡೆಯಲು ಮುಂದಾಗಿದೆ. ಇದರಿಂದ ರಾಜ್ಯದ ರೈತರು ಮತ್ತು ಕುಡಿವ ನೀರಿನ ಬಳಕೆಗೆ ಬೇಸಿಗೆಯಲ್ಲಿ ತೊಂದರೆಯಾಗಲಿದೆ ಎಂದು ದೂರಿದರು.
ಅಕ್ರಮಕ್ಕೆ ಅಧಿಕಾರಿಗಳೇ ಕಾರಣ: ತುಂಗಭದ್ರಾ ಜಲಾಶಯದಿಂದ 2013- 14ನೇ ಸಾಲಿಗೆ 11.214 ಟಿಎಂಸಿ ನೀರನ್ನು ಆಂಧ್ರಕ್ಕೆ ಹಂಚಿಕೆ ಮಾಡಲಾಗಿದೆ. 2.071 ಟಿಎಂಸಿ ನೀರನ್ನು ಆಂಧ್ರವು ನದಿಯ ಮೂಲಕ ಈಗಾಗಲೇ ಪಡೆದಿದೆ.
ಹಾಗೆಯೇ ಬಲದಂಡೆ ಮೇಲ್ಮಟ್ಟದ ಕಾಲುವೆಯ ಮೂಲಕ 4.498 ಟಿಎಂಸಿ ನೀರು ಪಡೆದುಕೊಂಡಿದೆ. ಮೇ ತಿಂಗಳವರೆಗೆ ಪಡೆಯಬೇಕಾದ ಬಾಕಿ ನೀರನ್ನು ಕಳೆದೆರಡು ದಿನಗಳಿಂದ ಆಂಧ್ರವು ನದಿಯ ಮೂಲಕ ಬಿಡುಗಡೆ ಮಾಡಿಸಿಕೊಂಡಿದೆ. ಇಂಥ ಅಕ್ರಮಕ್ಕೆ ತುಂಗಭದ್ರಾ ಮಂಡಳಿಯಲ್ಲಿರುವ ಆಂಧ್ರದ ಅಧಿಕಾರಿಗಳೇ ಕಾರಣರಾಗಿದ್ದಾರೆಂದು ದೂರಿದರು.
ಸಿಎಂ ಗಮನಕ್ಕೆ ತನ್ನಿ: ತುಂಗಭದ್ರಾ ಮಂಡಳಿಯಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಇಬ್ಬರೂ ಆಂಧ್ರದವರಾಗಿದ್ದು, ನೀರಿಗೆ ಬೇಡಿಕೆ ಬರುತ್ತಿದ್ದಂತೆಯೇ ಮುತುವರ್ಜಿ ವಹಿಸಿ ನೀರು ಹರಿಸಲಾರಂಭಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದ ಅವರು, ಈ ಕುರಿತು ಕೂಡಲೇ ಈ ಭಾಗದ ಎಲ್ಲ ಶಾಸಕರು ಹಾಗೂ ನೀರಾವರಿ ಸಚಿವರು ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೀರು ಹರಿಸುವುದಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ತುಂಗಭದ್ರಾ ಮಂಡಳಿಯನ್ನು ರದ್ದುಗೊಳಿಸಬೇಕೆಂಬ ಬೇಡಿಕೆ ತಮ್ಮದಾಗಿದ್ದು, ಮಂಡಳಿಯ ಎದುರು ನೀರು ನಿಲುಗಡೆಯಾಗುವವರೆಗೆ ಹೋರಾಟ ಮಾಡಲಾಗುತ್ತದೆ. ಹಾಗೊಂದು ವೇಳೆ ಆಂಧ್ರದ ಪಾಲಿನ ಎಲ್ಲ ನೀರನ್ನು ಈಗಲೇ ಹರಿಸಿದಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ಪ್ರದೇಶದಲ್ಲಿ ಬೆಳೆದ ಬೆಳೆ ಮತ್ತು ಎಲ್ಲ ಕುಡಿವ ನೀರಿನ ಯೋಜನೆಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವವಾಗಲಿದೆ ಎಂದು ಈಗಾಗಲೇ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಐತೀರ್ಪಿನ ಉಲ್ಲಂಘನೆ: ಬಚಾವತ್ ಐತೀರ್ಪಿನಂತೆ ಆಂಧ್ರವು ಕಾಲುವೆಯ ಒಂದು ಜಾಲದಿಂದ ಮತ್ತೊಂದು ಕಾಲುವೆಗೆ ಹರಿಸುವಂತಿಲ್ಲ. ಹಾಗೊಂದು ವೇಳೆ ಹರಿಸುವ ಅವಶ್ಯಕತೆ ಬಿದ್ದಲ್ಲಿ ಎರಡೂ ಸರ್ಕಾರಗಳ ಒಪ್ಪಿಗೆ ಪಡೆಯಬೇಕು. ಆದರೆ ಆಂಧ್ರ ಒಪ್ಪಿಗೆಯಿಲ್ಲದೇ ನೀರು ಹರಿಸಿಕೊಳ್ಳಲಾರಂಭಿಸಿದೆ ಎಂದು ದೂಷಿಸಿದರು.
2012- 13ನೇ ಸಾಲಿನಲ್ಲಿ ಆಂಧ್ರದ ಅಧಿಕಾರಿಗಳ ಕುಮ್ಮಕ್ಕಿನಿಂದ ಆಂಧ್ರ ಹೆಚ್ಚಿನ ನೀರು ಪಡೆದಿದ್ದು ಅದರಿಂದ ಬೇಸಿಗೆಯಲ್ಲಿ ರೈತರ ಬೆಳೆಗೆ ಮತ್ತು ಕುಡಿವ ನೀರಿನ ಉದ್ದೇಶಕ್ಕೆ ಹಿನ್ನಡೆಯಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದ ರೈತರು ನೀರಿಗಾಗಿ ಮಾಡಿದ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಆದರೆ ಸದ್ಯ ಅವಧಿಗೂ ಮುನ್ನವೇ ಎಲ್ಲ ನೀರು ಬಳಕೆ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.
ಸರ್ಕಾರ ಮಧ್ಯಪ್ರವೇಶಿಸಲಿ: ರಾಜ್ಯ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಆಂಧ್ರಕ್ಕೆ ಹರಿಸುತ್ತಿರುವ ನೀರನ್ನು ಮೇ ಅಂತ್ಯದವರೆಗೆ ಹರಿಸುವ ಬಗ್ಗೆ ಎಚ್ಚರಿಕೆ ನೀಡಬೇಕು. ನೀರಾವರಿ ಸಲಹಾ ಸಮಿತಿ ಸಭೆಯಂತೆ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರಿಗೆ ಸಮರ್ಪಕ ನೀರೊದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಭೂಪಾಲ, ಕೃಷಿಕ ಸಮಾಜದ ಮುಖಂಡ ಎಚ್.ಸಿದ್ದನಗೌಡ, ಅಮರೇಶ್ ಹೊಸಮನಿ, ಶರಣಗೌಡ ಸೇರಿ ಅನೇಕರಿದ್ದರು.