ಖಾತ್ರಿ ಯೋಜನೆಯಲ್ಲಿ ಗೋಲ್ಮಾಲ್: ಆರೋಪ
ಮುದಗಲ್: ಪಟ್ಟಣ ಸಮೀಪದ ತಲೇಖಾನ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಂಜಿಎನ್ಆರ್ಇಜಿ (ಉದ್ಯೋಗ ಖಾತ್ರಿ) ಯೋಜನೆಯಡಿ ಅನೇಕ ರೀತಿಯ ಗೋಲ್ಮಾಲ್ ನಡೆದಿದೆ ಎಂದು ಜಿ.ಪಂ. ಸದಸ್ಯರ ಅಪ್ತ ನಿಂಗಪ್ಪ ಚವ್ಹಾಣ ಆರೋಪಿಸಿದ್ದಾರೆ.
2012-13ನೇ ಸಾಲಿನ ಜಿಪಂನ ಎನ್ಆರ್ಡಿಡಬ್ಲೂಪಿ ಯೋಜನೆಯಡಿ ಹಡಗಲಿ, ದೇಸಾಯಿ ಭೋಗಾಪುರ ಸೇರಿದಂತೆ ವಿವಿಧ ಶಾಲೆಗಳಿಗೆ ಅಳವಡಿಸಲಾದ ಕುಡಿಯುವ ನೀರಿನ ಗುಮ್ಮಿ, ನಳಗಳ ಕಾಮಗಾರಿ ಬಗ್ಗೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ ಪಾಪಣ್ಣ, ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಅಮರೇಶ ವಿಟ್ಲಾಪುರ ಗ್ರಾಪಂ ವ್ಯಾಪ್ತಿಯ ಖಾತ್ರಿ ಯೋಜನೆಯಡಿ ಕೆಲಸ ಮಾಡದ ಕೂಲಿಕಾರರ ಹೆಸರು ಸೇರಿಸಿ ಖಾತ್ರಿ ಕೂಲಿ ಪಡೆಯುತ್ತಿದ್ದಾರೆ.
ತಿರುಗೇಟು: ಪಾಪಾಣ್ಣನ ತಾಂಡಾದ ಹಳೆ ಚರಂಡಿ ಕಾಮಗಾರಿಗೆ ಸಿಮೆಂಟ್ ಲೇಪನಮಾಡಿ ಬಿಲ್ ಪಾವತಿಸಿಕೊಳ್ಳುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಕೆಜಿಪಿ ಮುಖಂಡ ನಿಂಗಪ್ಪ ಚವ್ಹಾಣ್ ತಿರುಗೇಟು ನೀಡಿದರು. ಮತ್ತೊಬ್ಬರ ಕಾಮಗಾರಿ ಬಗ್ಗೆ ಆರೋಪ ಮಾಡುವ ಅಧ್ಯಕ್ಷ, ಸದಸ್ಯರು ದೇಸಾಯಿ ಭೋಗಾಪುರ ಪಾಪಣ್ಣನ ತಾಂಡಾದ ಚರಂಡಿ ಕಾಮಗಾರಿ, ಹಡಗಲಿ ಗ್ರಾಮದ ದುರುಗಮ್ಮ ದೇವಸ್ಥಾನದ ಮುಂದೇ ನಿರ್ಮಿಸಲಾದ ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಲಿ ಎಂದು ಸವಾಲು ಹಾಕಿದರು.
ಕಾಮಗಾರಿ ಕಳಪೆ: 13ನೇ ಹಣಕಾಸು ಯೋಜನೆಯಡಿ ವೆಂಕನಗೌಡ ನಿರ್ಮಿಸುತ್ತಿರುವ ರಾಮಪ್ಪನ ತಾಂಡಾದ ಶಾಲಾ ಕಾಂಪೌಂಡ್ ಕಾಮಗಾರಿ ಕಳಪೆಯಾಗಿದೆ. ಗ್ರಾ.ಪಂ. ವಾಪ್ತಿಯಲ್ಲಿ ಫಲಾನುಭವಿಗಳ ಶೌಚಾಲಯ ನಿರ್ಮಾಣಕ್ಕೆ, ಮನೆ ನಿರ್ಮಾಣಕ್ಕೆ ಸಹಾಯಧನದ ಚೆಕ್ ನೀಡಲು ರು. 3 ರಿಂದ ರು. 4 ಸಾವಿರ ಪಡೆಯುತ್ತಿದ್ದಾರೆ. ಇಂದಿರಾ ಅವಾಜ್ ಮನೆಗಳ ಜಿಪಿಎಸ್ ಮಾಡಿದರೆ ಸಿಬ್ಬಂದಿ ರು. 100 ರಿಂದ ರು. 500 ಪಡೆಯುತ್ತಿದ್ದಾರೆ. ಕುಡಿಯುವ ನೀರು, 13ನೇ ಹಣಕಾಸು, ನಿಧಿ 1ರ ಅನುದಾನದಲ್ಲಿ, ಬಿಆರ್ಜಿಎಫ್ ಯೋಜನೆಯಡಿ ಅನೇಕ ಅವ್ಯವಹಾರಗಳನ್ನು ನಡೆಸಲಾಗಿದೆ. ಈ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ತಲೇಖಾನ ಗ್ರಾಪಂ ಕಡೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾ.ಪಂ. ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸ ಬೇಕು ಎಂದು ಅವರು ಆಗ್ರಹಿಸಿದ್ದಾರೆ.