ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾರುಕಟ್ಟೆಯಲ್ಲಿ ಬತ್ತದ ದರ ಏರಿಕೆ ಖರೀದಿ ಕೇಂದ್ರಕ್ಕೆ ರೈತರ ನಿರಾಸಕ್ತಿ!

Mainashree
Updated On : 24 Jan 2014, 11:34 am

ಕ.ಪ್ರ. ವಾರ್ತೆ  ರಾಯಚೂರು  ಜ.23
ಬತ್ತ ದರ ಕುಸಿತದಿಂದ ಕಂಗೆಟ್ಟಿದ್ದ ರೈತರು ಈಗ ಸರ್ಕಾರದ ಬತ್ತ ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಲೇ ಇಲ್ಲ.  ಹತ್ತಾರು ನಿಬಂಧನೆಗಳು ರೈತರನ್ನು ಈ ಕೇಂದ್ರಗಳತ್ತ ವಿಮುಖರಾಗುವಂತೆ ಮಾಡುತ್ತಿವೆ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಬತ್ತ ಖರೀದಿ ಕೇಂದ್ರಗಳಲ್ಲಿ ಖರೀದಿಯಾಗಿದ್ದು ಕೇವಲ 25 ಕ್ವಿಂಟಲ್ ಮಾತ್ರ. ಆದರೆ ಅದೇ ವೇಳೆ ಖರೀದಿ ಕೇಂದ್ರ ಎಫೆಕ್ಟ್‌ನಿಂದಾಗಿ ಮಾರುಕಟ್ಟೆಯಲ್ಲಿ ಬತ್ತದ ದರ ಗಣನೀಯ ಏರಿಕೆ ಕಂಡಿದೆ.
ಜಿಲ್ಲೆಯ ತುಂಗಭದ್ರಾ ಮತ್ತು ಕೃಷ್ಣಾ ನೀರಾವರಿ ಪ್ರದೇಶದಲ್ಲಿ ಬತ್ತವೇ ಪ್ರಧಾನ ಬೆಳೆ. ಆರು ಲಕ್ಷಕ್ಕಿಂತಲೂ ಹೆಚ್ಚಿನ ಎಕರೆ ಪ್ರದೇಶದಲ್ಲಿ ರೈತರು ಬತ್ತ ಬೆಳೆಯುತ್ತಾರೆ. ಆದರೆ ಮುಂಗಾರು ಹಂಗಾಮಿಗೆ ಬೆಳೆದ ಬತ್ತ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆಯೇ ದರ ಕುಸಿದಿತ್ತು. ಅದರಿಂದ ರೈತರು ಆಕ್ರೋಶಗೊಂಡು ಬೆಂಬಲ ಬೆಲೆಯಲ್ಲಿ ಬೆಳೆಯನ್ನು ಖರೀದಿಸಲು ಒತ್ತಾಯಿಸಿದ್ದರು.
ಕೇಂದ್ರ ಸರ್ಕಾರವು 2013-14ನೇ ಸಾಲಿಗೆ ಸಾಮಾನ್ಯ ಬತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1310 ದರ ನಿಗದಿ ಮಾಡಿದರೆ, ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ 290 ನೀಡಿ ಒಟ್ಟು 1600 ಪ್ರತಿ ಕ್ವಿಂಟಲ್‌ಗೆ ನಿಗದಿ ಮಾಡಿ ಬತ್ತ ಖರೀದಿ ಕೇಂದ್ರಗಳ ಮೂಲಕ ಖರೀದಿಗೆ ಆರಂಭಿಸಿದೆ.
ಸಿಂಧನೂರು, ಮಾನವಿ ಹಾಗೂ ರಾಯಚೂರು ನಗರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ ಇಲ್ಲಿ ಬತ್ತದ ಗುಣಮಟ್ಟ ಪರೀಕ್ಷೆಗೆ ತಜ್ಞರ ಕೊರತೆಯಿದೆ. ಹಾಗೆಯೇ ಖರೀದಿ ಕೇಂದ್ರದ ಸಿಬ್ಬಂದಿಯ ಅಸಹಕಾರದಿಂದಾಗಿ ರೈತರು ಖರೀದಿ ಕೇಂದ್ರಗಳತ್ತಲೇ ಧಾವಿಸುತ್ತಿಲ್ಲ.
ಖರೀದಿ ಕೇಂದ್ರಕ್ಕೆ ತರುವ ಬತ್ತವನ್ನು 50 ಕೆ.ಜಿ. ಚೀಲದಲ್ಲಿಯೇ ತರಬೇಕು. ಪ್ರತಿ ರೈತರಿಂದ 25 ಕ್ವಿಂಟಲ್ ಬತ್ತ ಮಾತ್ರ ಖರೀದಿಸಲಾಗುತ್ತದೆ ಎಂಬುದೂ ಸೇರಿ ವಿವಿಧ ಹತ್ತಾರು ನಿಯಮಗಳಿಂದ ರೈತರು ಬೇಸತ್ತಿದ್ದಾರೆ.
ದರ ಏರಿಕೆ: ಒಂದೆಡೆ ರಾಜ್ಯ ಸರ್ಕಾರ ಬತ್ತ ಖರೀದಿ ಕೇಂದ್ರ ಆರಂಭಿಸುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಬತ್ತದ ದರ ತಾನಾಗಿಯೇ ಏರಿದೆ. ರೈತರು ಖರೀದಿ ಕೇಂದ್ರಗಳಿಗೆ ತೆರಳುವುದನ್ನು ತಡೆಯಲು ವರ್ತಕರು ದರ ಏರಿಸಿರುವುದು ಸ್ಪಷ್ಟ. ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಆರಂಭಕ್ಕೂ ಮುನ್ನ ಬತ್ತದ ದರ 1 ಸಾವಿರ-1,500 ಇತ್ತು. ಖರೀದಿ ಕೇಂದ್ರಗಳು ಆರಂಭವಾದ ನಂತರ ಪ್ರತಿ ಕ್ವಿಂಟಲ್‌ಗೆ 2 ಸಾವಿರ ಗಡಿ ದಾಟಿದೆ. ಹಾಗಾಗಿ ರೈತರಿಗೆ ಉತ್ತಮ ಬೆಲೆಯೂ ಸಿಗುತ್ತಿದೆ. ಒಟ್ಟಾರೆಯಾಗಿ ಖರೀದಿ ಕೇಂದ್ರದ ಎಫೆಕ್ಟ್‌ನಿಂದಾಗಿ ಮಾರುಕಟ್ಟೆಯಲ್ಲಿ ಸಾಮಾನ್ಯ ಬತ್ತದ ದರ ಏರಿಕೆ ಕಂಡು ರೈತರಿಗೆ ನೆಮ್ಮದಿಯಾಗಿದೆ. ಖರೀದಿ ಕೇಂದ್ರಗಳಿಗೆ ಕೆಲಸವಿಲ್ಲದಂತಾಗಿದೆ.

ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement