ವಿಳಂಬವಾದ್ರೆ ಹೋರಾಟ
ಹುಮನಾಬಾದ್: ಹೈ-ಕ ಭಾಗಕ್ಕೆ 371(ಜೆ) ಅನ್ವಯ ಶಿಕ್ಷಣ, ಉದ್ಯೋಗ, ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ತಕ್ಷಣ ಜಾರಿಗೊಳಿಸಬೇಕು. ವಿಳಂಬ ನೀತಿ ಅನುಸರಿಸಿದಲ್ಲಿ ಹೋರಾಟ ಮಾಡಲಾಗುವುದು ಎಂದು ಹೈ-ಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜಿನಾಥ ಪಾಟೀಲ್ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಗುರುವಾರ ಬಸವತೀರ್ಥ ವಿದ್ಯಾಪೀಠ ವತಿಯಿಂದ ಆಯೋಜಿಸಲ್ಪಟ್ಟ 25 ವರ್ಷ ಶಿಕ್ಷಣ ಕ್ಷೇತ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ವಿರೂಪಾಕ್ಷಪ್ಪಾ ಅಗಡಿ ಅವರ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, 371(ಜೆ)ಯ ಎಲ್ಲಾ ಪ್ರಕ್ರಿಯೆಗಳು ಶೀಘ್ರಗತಿಯಲ್ಲಿ ಮುಗಿಯಬೇಕೆಂದು ತಿಳಿಸಿದರು.
ವಿಳಂಬ ನೀತಿ ಬೇಡ: ಹೈದ್ರಾಬಾದ್ ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಹಿನ್ನಡೆ ಕಂಡಿದ್ದು, ನಮ್ಮ ಹೋರಾಟ ರಾಜ್ಯ ಹಾಗೂ ಕೆಂದ್ರ ಸರ್ಕಾರಗಳ ಪ್ರಯತ್ನದಿಂದ 371(ಜೆ) ಜಾರಿಗೆ ತರಲಾಗಿದೆ. ಮುಂದಿನ ಕಾರ್ಯಗಳು, ಸಮಿತಿಗಳು ಹೀಗೆ ಮತ್ತಿತರರ ಕಾರ್ಯಗಳು ಬೇಗನೆ ಮುಗಿಯಬೇಕು. ಅಲ್ಲದೆ ವಿಳಂಬ ನೀತಿ ಅನುಸರಿಸದೆ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಅವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸ್ಪರ್ಧಾತ್ಮಕ ಯುಗ: ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಮಠ ಮಂದರಿಗಳು ಕಟ್ಟಿ ಬೆಳೆಸಿದಂತೆ ಶಿಕ್ಷಣ ಸಂಸ್ಥೆಯು ಕಟ್ಟಿ ಬೆಳೆಸುವುದು ಕಷ್ಟಕರ ಕೆಲಸವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವ ಸದುದ್ದೇಶದಿಂದ ಬಸವತೀರ್ಥ ವಿದ್ಯಾಪೀಠವು ಶರಣರ ತತ್ವಗಳನ್ನು ಅಳವಡಿಸಿಕೊಂಡು ಕಾಯಕ ಜೀವಿಯಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಲವಾರು ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಪ್ರಾಮಾಣಿಕತೆ: ಪಟ್ಟಣದ ಹಿರೇಮಠದ ರೇಣುಕಾ ಗಂಗಾಧರ ಶಿವಾಚಾರ್ಯ ಮಾತನಾಡಿ, ವಿರೂಪಾಕ್ಷಪ ಅಗಡಿ ಅವರ ಕಾರ್ಯಗಳನ್ನು ಹಾಗೂ ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರೂ ಕಲಿಯಬೇಕಾಗಿದೆ ಎಂದರು. ಸಂಸ್ಥೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ್ ತಳಘಟಕರ್ ಅಧ್ಯಕ್ಷತೆ ವಹಿಸಿದರು.