'ಖಾತ್ರಿ'ಗೆ ಕತ್ರಿ; ಕೂಲಿಗಾಗಿ ತಪ್ಪದ ಗುಳೆ
ಕ.ಪ್ರ. ವಾರ್ತೆ , ಮುದಗಲ್ , ಜ.24
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಸಿಗದೇ ಬೇಸತ್ತ ಅನೇಕ ಕೂಲಿಕಾರರ ಕುಟುಂಬಗಳು ರಾಜಧಾನಿ ಸೇರಿದಂತೆ ಅಂತಾರಾಜ್ಯಗಳಿಗೆ ಗುಳೆ ಹೊರಟಿರುವುದು ಸಾಮಾನ್ಯವಾಗಿದೆ.
ಅನೇಕ ಕುಟುಂಬಗಳು ನಿರ್ವಹಣೆಗೆ ಬೇರೆ ದಾರಿ ಇಲ್ಲದೆ ಕೆಲಸ ಅರಸಿ ರಾಜಧಾನಿ ಬೆಂಗಳೂರ, ಮಂಗಳೂರ, ಉಡುಪಿ, ಕುಂದಾಪುರ ಸೇರಿದಂತೆ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತಮಿಳುನಾಡು ಕಡೆ ಗುಳೆ ಹೋಗುವಂತಾಗಿದೆ. ಪಟ್ಟಣ ಸೇರಿದಂತೆ ಅಡೆಬಾವಿ, ಕಾಚಾಪೂರ, ಕಿಲಾರಹಟ್ಟಿ, ಲೆಕ್ಕಿಹಾಳ, ಬಗಡಿ ತಾಂಡಾ, ಜಂತಾಪೂರ, ವ್ಯಾಕರನಾಳ, ನಾಗಲಾಪೂರ, ದೇಸಾಯಿ ಭೋಗಾಪೂರ ಸೇರಿದಂತೆ ಅನೇಕ ಗ್ರಾಮಗಳಿಂದ ನಿತ್ಯ ನೂರಾರು ಕುಟುಂಬಗಳು ಬೇರೆ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ.
ಜನತೆಗೆ ಕೇವಲ ಕೂಲಿ ಮಾತ್ರವಲ್ಲದೆ, ಕುಡಿಯುವ ನೀರು, ಆಹಾರ, ಜಾನುವಾರುಗಳಿಗೆ ಮೇವು, ಪಡಿತರ ಸೇರಿದಂತೆ ಮೂಲಭೂತ ಸೌಲಭ್ಯಗಳ ತೊಂದರೆಯಾಗಿದೆ. ಜನರಿಗೆ ನೀರು, ಉದ್ಯೋಗ ನೀಡಬೇಕಾದ ಜಿಲ್ಲಾ ಮತ್ತು ತಾಲೂಕಾಡಳಿತ ಅವುಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.
ಪಡಿತರದ ಆವಾಂತರ: ಅನೇಕ ಪಡಿತರ ಕಾರ್ಡ್‌ಗಳು ಧಿಢೀರನೆ ರದ್ದಾಗಿರುವುದು ಒಂದೆಡೆಯಾದರೆ ದಾಖಲಾತಿಗಳು, ಪ್ರಮಾಣ ಪತ್ರಗಳಿಲ್ಲದೆ ಪಡಿತರ ಕಾರ್ಡ್‌ಗಳನ್ನು ತಡೆಹಿಡಿಯಲಾದ ಪ್ರಕರಣಗಳ ಹೆಚ್ಚಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಗ್ರಾಮಿಣ ಕೂಲಿಕಾರರು ಹಾಗೂ ಬಡ ಕುಟುಂಬಗಳ ಕಷ್ಟವನ್ನೇ ನೆಪಮಾಡಿಕೊಂಡಿರುವ ಮಧ್ಯವರ್ತಿಗಳು ಪಡಿತರ ಕಾರ್ಡ್ ಪುನರಾರಂಭಿಸಲು ಹಾಗೂ ಹೊಸ ಕಾರ್ಡ್‌ಗಳನ್ನು ಹೊಂದಲು ಬೇಕಾದ ಸೌಲಭ್ಯಗಳನ್ನು ನೀಡುತ್ತೇವೆಂದು ದುಡ್ಡು ಮಾಡುತ್ತಿದ್ದಾರೆ.
ಗ್ರಾಮೀಣ ಕೂಲಿಕಾರರ ಜೀವಾಳವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಕ್ರಿಯಾ ಯೋಜನೆ ಕೆಲ ಗ್ರಾ.ಪಂ.ಗಳಲ್ಲಿ ಮಂಜುರಾತಿಯಾಗಿಲ್ಲ.
ಕಬ್ಬು ಕಟಾವಿಗೆ ದೌಡು: ರಾಜಧಾನಿಯಷ್ಟೇ ಅಲ್ಲದೇ ಅನ್ನದಾತನ ಕುಟುಂಬಗಳು ಕಬ್ಬು ಕಟಾವಿಗೆ ಬೆಳಗಾವಿ ಜಿಲ್ಲೆಗೆ ಹೋಗುತ್ತಿದ್ದಾರೆ. ಕಬ್ಬು ಕಾರ್ಖಾನೆ ಮಾಲೀಕರು ಗ್ರಾಮೀಣ ಭಾಗಗಳಿಗೆ ತೆರಳಿ ಪ್ರತಿ ಕುಟುಂಬಕ್ಕೆ ಮುಂಗಡ ಹಣ ಪಾವತಿಸುವ ಪ್ರಕ್ರಿಯೆ ಮುದಗಲ್ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಅನೇಕ ಬಡ ಕುಟುಂಬಗಳು ಕಬ್ಬು ಕಟಾವಿಗೆ ಮಹಾಲಿಂಗಪುರ, ಜಮಖಂಡಿ, ಮುಧೋಳ ಸೇರಿದಂತೆ ಅನೇಕ ಪ್ರದೇಶಗಳಿಗೆ ಕುಟುಂಬ ಸಮೇತ ಗುಳೆ ಹೊರಟಿದ್ದಾರೆ.
ಅನುದಾನಕ್ಕಿಲ್ಲ ಬರ: ಗ್ರಾಮೀಣ ಪ್ರದೇಶಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾ.ಪಂ. ಗೆ ಅನುದಾನದ ಹೊಳೆ ಹರಿಸಿದರೂ ಅಧಿಕಾರಿಗಳ ಬೇಜವಾಬ್ದಾರಿತನವೋ ಅಥವಾ ಜನಪ್ರತಿನಿಧಿಗಳ ನಿರುತ್ಸಾಹದಿಂದಲೋ ಗ್ರಾಮೀಣ ಭಾಗದ ಅಭ್ಯುದಯ ಮರೀಚಿಕೆಯಾಗಿಯೇ ಉಳಿದಿದೆ.
ಬಡತನದಿಂದ ಬೇಸತ್ತ ನಮಗೆ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮಕ್ಕಳ ಓದಿಗೆ ತೊಂದರೆ. ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕಾದರೆ ಗುಳೆ ಹೋಗಿ ಕುಟುಂಬ ಸಮೇತರಾಗಿ ದುಡಿಯುವುದೊಂದೇ ದಾರಿ. ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಜನಪ್ರತಿನಿಧಿಗಳಿಗೆ ಬರತೈತ್ರಿ. ಆಮೇಲೆ ನಾವ್ಯಾರೊ ಅವರ್ಯಾರೊ. ಹೀಗಾಗಿ ನಮ್ ಹೈದ್ರಾಬಾದ್ ಕರ್ನಾಟಕ ಹಿಂದ್ ಉಳಿದೈತ್ರಿ ಎಂದು ನಿಂಗಮ್ಮ ದೇಸಾಯಿ ಬೋಗಾಪುರ ಹೇಳುತ್ತಾರೆ.
-ಪಂಪಯ್ಯ ಮಠ