ಗೋವುಗಳ ನಿಗೂಢ ಸಾವು; ತನಿಖೆಗೆ ಆಗ್ರಹ
ಕ.ಪ್ರ. ವಾರ್ತೆ , ರಾಯಚೂರು , ಜ.24
ಮಲಿಯಾಬಾದ್ ಗೋಶಾಲೆಯಲ್ಲಿ ಅಸಂಖ್ಯ ಗೋವುಗಳ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಲಿಯಾಬಾದ್ ಗೋಶಾಲೆಯಲ್ಲಿ 60ಕ್ಕೂ ಹೆಚ್ಚು ಗೋವುಗಳು ನಿಗೂಢವಾಗಿ ಸಾವನ್ನಪ್ಪಲು ಆಹಾರದ ಕೊರತೆಯೇ ಕಾರಣ ಎಂದು ಹೇಳಲಾಗಿದೆ. ಹಾಗೆಯೇ ಅಸ್ವಸ್ಥ ಗೋವುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡದಿರುವುದು ದಾರಿ ಮಾಡಿದೆ ಎಂದು ಆರೋಪಿಸಿದರು.
ಗೋವುಗಳ ಸಾವಿಗೆ ಕಾರಣರಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿರುವ ಸಮಿತಿಯವರು, ಗೋಶಾಲೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ, ವಂತಿಗೆ ಮತ್ತಿತರೆ ಹಣಕಾಸು ವಿವರಗಳ ಬಗ್ಗೆ ತನಿಖೆಯಾಗಬೇಕು. ತಪ್ಪೆಸಗಿದವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಕೃಷ್ಣವೇಣಿ, ಸರಳಾ, ಜ್ಯೋತಿ, ಸುನಂದಾ, ಜಯಾ ಪಾಟೀಲ್, ಶೋಭಾ ಮತ್ತು ವಿಜಯ ಲಕ್ಷ್ಮಿ ಮತ್ತಿತರರಿದ್ದರು.