ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಡಿವೈಎಸ್ಪಿ ಚಾಲನೆ
ಲಿಂಗಸ್ಗೂರು: ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ವಾಹನ ಮಾಲೀಕರ ಸಂಘಗಳ ಜೊತೆಗೂಡಿ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಗೆ ಡಿವೈಎಸ್ಪಿ ಅನಿತಾ ಹದ್ದಣ್ಣವರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರ ನೀಡಿದ ಕಾರ್ಯಕ್ರಮಗಳ ಸೂಚನೆಯಂತೆ 'ರಸ್ತೆಯಲ್ಲಿದ್ದಾಗ ಯಾವಾಗಲೂ ತಾವು ಮೊದಲು' ಎಂಬ ಧ್ಯೇಯದೊಡನೆ ಜ.21 ರಿಂದ 27 ರವರೆಗೆ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ವಾಹನಗಳ ಟಾಪಿನ ಮೇಲೆ ಪ್ರಯಾಣ ಮಾಡಬಾರದು. ಅತಿವೇಗವಾಗಿ, ಅಲಕ್ಷ್ಯತನದಿಂದ ನಡೆಸುವುದು ಅಪರಾಧ. ರಾತ್ರಿ ಹೊತ್ತಿನಲ್ಲಿ ವಾಹನಕ್ಕೆ ಸಾಕಷ್ಟು ಲೈಟು ಇಲ್ಲದೆ ನಡೆಸದಿರಿ. ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ನಡೆಸಿದರೆ ಮೃತ್ಯುವಿಗೆ ಆಹ್ವಾನ ನೀಡಿದಂತೆ. ವಾಹನಗಳಿಗೆ ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಿರಿ. ವಾಹನ ನಡೆಸುವಾಗ ಧೂಮಪಾನ ಮಾಡುವುದು ಅಪರಾಧ. ಚಾಲನೆ ಲೈಸನ್ಸ್ ಮರೆಯದೆ ನವೀಕರಿಸಿ ಎಂಬ ನಿಯಮಗಳನ್ನು ಪಾಲನೆ ಮಾಡಲು ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಿವಿಧ ವಾಹನಗಳ ಮಾಲೀಕರ ಸಂಘದ ಜೊತೆಗೂಡಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸಿಪಿಐ ವರದರಾಜ, ಪಿಎಸ್ಐ ಖಾಜಾಹುಸೇನ, ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಬಾಬಾಜಾನಿ, ಸುಲೇಮಾನ್, ಕೃಷ್ಣ ವಾಹನ ಸಂಘದ ಅಧ್ಯಕ್ಷ ರುಸ್ತುಂ, ಮುಖಂಡರಾದ ಪ್ರಭುಲಿಂಗ ಮೇಗಳಮನಿ, ಲಿಂಗಪ್ಪ ಪರಂಗಿ, ದುರುಗಪ್ಪ ಅಗ್ರಹಾರ, ಹನುಮಂತ ಇದ್ದರು.