ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಧರಣಿ

Mainashree
Updated On : 26 Jan 2014, 12:35 pm

ರಾಯಚೂರು: ಸಂವಿಧಾನದ 371(ಜೆ)ನೇ ಕಲಂ ಅಡಿ ಉದ್ಯೋಗ ನೇಮಕಾತಿಯಲ್ಲಿ ವಿಶೇಷ ಸವಲತ್ತುಗಳಡಿ ಸೇವೆ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ ಹೈ.ಕ. ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ನೌಕರರ ವಿಭಾಗೀಯ ಜಂಟಿ ಕ್ರಿಯಾ ಸಮಿತಿಯಿಂದ ಧರಣಿ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಅಭಿವೃದ್ಧಿಗಾಗಿ 371(ಜೆ) ಕಲಂ ಜಾರಿಯಾಗಿದ್ದು, ಅದರಡಿ ಉದ್ಯೋಗ ನೇಮಕಾತಿಗೆ ವಿಶೇಷ ಸೌಲತ್ತು ಕಲ್ಪಿಸಲಾಗಿದೆ. ಇದರಡಿ ಹೈ.ಕ. ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
3500 ಸಿಬ್ಬಂದಿ ಕಾರ್ಯನಿರ್ವಹಣೆ: ಕಳೆದ 10 ವರ್ಷಗಳಿಂದ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯರ ಉದ್ಯೋಗ ಕಾಯಂಗೊಳಿಸುವತ್ತ ಸರ್ಕಾರ ಕೂಡಲೇ ಮುಂದಾಗಬೇಕು. ಇಲಾಖೆ ವಿವಿಧ ಕಾರ್ಯಕ್ರಮಗಳಲ್ಲಿ ಕಳೆದ 8-10 ವರ್ಷಗಳಿಂದ 3500 ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.
ನೇಮಕಾತಿ ನಿಯಮಾವಳಿ ರಚಿಸಿ: ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಂಡು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅವಶ್ಯವಿರುವ ಅರ್ಹತಾ ಷರತ್ತುಗಳನ್ನು ಪೂರೈಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹುದ್ದೆಗಳಿಗೆ ನಿಯೋಜನೆಗೊಂಡಿದ್ದಾರೆ.
 ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾತಿಯಿಲ್ಲದ ಪದನಾಮಗಳಿಗೆ ನೇಮಕಾತಿ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಸೇವೆ ಕಾಯಮಾತಿಗೆ ಆಗ್ರಹ: ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಹೈ.ಕ. ಭಾಗದಲ್ಲಿನ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ರಚಿಸಿ ಜಾರಿಗೆ ತರಬೇಕು. ಉದ್ಯೋಗ ಕಾಯಮಾತಿಯಾಗುವವರೆಗೆ ಹೈ.ಕ. ಭಾಗದ ಗುತ್ತಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವೆಂಕಟರಾಮರೆಡ್ಡಿ, ಶರಣಗೌಡ ಪಾಟೀಲ್, ಪಾಮೇಶ್ ಕಟ್ಟಿಮನಿ, ರಾಮು, ವಿಶ್ವನಾಥ್, ಸೋಮನಾಥರೆಡ್ಡಿ, ಪ್ರಕಾಶ, ನಾಗರಾಜ್, ಡಾ. ಮಂಜುನಾಥ್, ಡಾ. ಸುನೀತಾ, ಡಾ. ನಾಗರಾಜ್, ವೆಂಕಟರಾಘವನ್, ಡಾ. ಮಲ್ಲಿಕಾರ್ಜುನ, ಅಬ್ದುಲ್‌ನಬಿ, ಅಮರೇಶ್ ನಾಗಭೂಷಣ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement