ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ
ಕನ್ನಡಪ್ರಭ ವಾರ್ತೆ ರಾಯಚೂರು ಜ.25
ದೇಶದ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನೂರಕ್ಕೆ ನೂರರಷ್ಟು ಮತದಾನ ಕೈಗೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ಕರೆ ನೀಡಿದರು.
ಅವರು ನಗರದ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗದಿಂದ ಆಯೋಜಿಸಿದ್ದ ಮತದಾರರ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳುವತ್ತ 18 ವರ್ಷ ಮೀರಿದ ಯುವಕರು ಆಸಕ್ತಿ ತೋರಬೇಕೆಂದು ಸಲಹೆ ನೀಡಿದರು. ಸುಭದ್ರ ದೇಶ ನಿರ್ಮಾಣದಲ್ಲಿ ಮತದಾನದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಯುವಕರೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಆ ಮೂಲಕ ಒಳ್ಳೆಯ ವ್ಯಕ್ತಿಗಳನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಂಡು ದೇಶದ ಪ್ರಗತಿಗೆ ನಾಂದಿ ಹಾಡಬೇಕೆಂದರು.
ಕಡ್ಡಾಯ ಮತದಾನ ಅಗತ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಂತಾಗಲು ಸುಭದ್ರ ಸರ್ಕಾರದ ಅವಶ್ಯಕತೆಯಿರುತ್ತದೆ. ಸುಭದ್ರ ಸರ್ಕಾರ ಆಯ್ಕೆಯಾಗುವಂತಾಗಲು ಎಲ್ಲರೂ ತಪ್ಪದೇ ಮತದಾನ ಮಾಡುವುದು ತೀರಾ ಅವಶ್ಯಕ ಎಂದು ಹೇಳಿದರು.
ಸುಭದ್ರ ಸಮಾಜ ಮತ್ತು ಸುಭದ್ರ ದೇಶ ನಿರ್ಮಾಣ ಕಾರ್ಯದಲ್ಲಿ ದೇಶದ ಯುವಕರು ಮಹತ್ವದ ಪಾತ್ರ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಯುವಕರು ಮತದಾನಕ್ಕೆ ಮುಂದಾಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು ಅವಶ್ಯಕ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಲ್ಲಿಯೇ ಭಾರತ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಅತಿ ದೊಡ್ಡ ರಾಷ್ಟ್ರವಾಗಿದೆ. ಜಾತಿ, ಮತ, ಪಂಥಗಳ ಬೇಧಭಾವವಿಲ್ಲದ ಸಮಾಜ ನಮ್ಮದಾಗಿದೆ. ಇಂಥ ಸಮಾಜ ಮತ್ತು ದೇಶವನ್ನು ಸುಭದ್ರವಾಗಿ ಕಟ್ಟುವ ನಿಟ್ಟಿನಲ್ಲಿ ಚುನಾವಣೆ ಆಯೋಗವು ಕಳೆದ ಅನೇಕ ವರ್ಷಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
ಉತ್ತಮ ಪ್ರತಿನಿಧಿಗಳು ಆಯ್ಕೆಯಾಗಲಿ: ದೇಶದ ಪ್ರತಿಯೊಬ್ಬ ನಿವಾಸಿಗೆ ಶ್ರೀಮಂತ, ಬಡವ ಎಂಬ ಬೇಧವಿಲ್ಲದೇ ಮತದಾನದ ಹಕ್ಕು ನೀಡಲಾಗಿದೆ. ಮತದಾನದ ಹಕ್ಕನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲರೂ ತಪ್ಪದೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಸಾಧ್ಯವಾಗುವಂತೆ ಮಾಡುವಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಯುವ ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು. ಪ್ರಜಾಪ್ರಭುತ್ವವನ್ನು ಮತ್ತಷ್ಟು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಮತದಾನ ಮಾಡುವುದು ಹೆಚ್ಚು ಇಂದಿನ ದಿನಮಾನದಲ್ಲಿ ಅವಶ್ಯಕವಾಗಿದೆ ಎಂದ ಅವರು, ಮತದಾನ ಮಾಡುವುದು ಎಲ್ಲರ ಪಾಲಿಗೆ ಹೆಮ್ಮೆಯ ವಿಷಯವಾಗಬೇಕು ಎಂದು ಕರೆ ನೀಡಿದರು.
30ಸಾವಿರ ಹೊಸ ಮತದಾರರು: ಜಿಲ್ಲೆಯಲ್ಲಿ ಸದ್ಯ 13ಲಕ್ಷ ಮತದಾರರಿದ್ದು, ಈಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 50 ಸಾವಿರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅವರಲ್ಲಿ 30ಸಾವಿರ ಹೊಸ ಮತದಾರರು ಯುವಕರಾಗಿದ್ದಾರೆ. ಯುವಕರು ಮತದಾನಕ್ಕೆ ಹೆಚ್ಚು ಆಸಕ್ತಿ ತೋರಬೇಕಿದೆ ಎಂದು ಹೇಳಿದರು. ಸಮಾರಂಭದಲ್ಲಿ ಹೆಚ್ಚುವರಿ ಡಿಸಿ ಎಂ.ತಿಮ್ಮಪ್ಪ ಮಾತನಾಡಿ, ಯುವಕರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮತದಾರರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಸಮಾರಂಭದಲ್ಲಿ ಹೆಚ್ಚುವರಿ ಎಸ್ಪಿ ಅಶೋಕಸದಲಗಿ, ಪ್ರಭಾರಿ ಸಹಾಯಕ ಆಯುಕ್ತ ಉಮೇಶ್, ನಗರಸಭೆ ಅಧ್ಯಕ್ಷೆ ಮಹಾದೇವಿ, ಆರ್ಟಿಒ ಸಿದ್ದಲಿಂಗೇಶ್ವರ ಸೇರಿ ಅನೇಕರಿದ್ದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಮತದಾರರ ಗುರುಚಿನ ಚೀಟಿ ವಿತರಿಸಲಾಯಿತು.