ಮಾನವಿ ಬಂದ್ ಹೋರಾಟ ತಾತ್ಕಾಲಿಕ ಹಿಂದಕ್ಕೆ
ಕನ್ನಡಪ್ರಭ ವಾರ್ತೆ ರಾಯಚೂರು ಜ.25
ಜಿಲ್ಲೆಯ ಮಾನವಿಯಲ್ಲಿ ಶನಿವಾರ ನಡೆಯಬೇಕಿದ್ದ ಮಾನ್ವಿ ಬಂದ್ ಹೋರಾಟವನ್ನು ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆ ಈಡೇರಿಸುವ ಬಗ್ಗೆ ಸಹಾಯಕ ಆಯುಕ್ತರು ಹಾಗೂ ಎಲ್ಲಾ ಇಲಾಖೆಗಳಿಂದ ಲಿಖಿತ ಭರವಸೆ ನೀಡಿರುವುದರಿಂದ ತಾತ್ಕಾಲಿಕ ಹಿಂಪಡೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಮಾನವಿಯಲ್ಲಿ ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಪ್ರಧಾನ ಸಂಚಾಲಕ ಹನುಮಂತಪ್ಪ ನಿಲೋಗಲ್, ವಕ್ತಾರ ಶ್ರೀಕಾಂತ ಪಾಟೀಲ್ ಗೂಳಿ, ಸಂಚಾಲಕ ಕೆ.ನಾಗಲಿಂಗಸ್ವಾಮಿ, ಪ್ರಭುರಾಜ ಕೊಡ್ಲಿ, ಪಟ್ಟಣಕ್ಕೆ ದಿನವೂ ಕುಡಿಯುವ ನೀರು ಪೂರೈಕೆಗೆ ಆಡಳಿತ ಒಪ್ಪಿದೆ ಎಂದು ತಿಳಿಸಿದರು.
ಬೇಡಿಕೆಗಳಿಗೆ ಸ್ಪಂದಿಸುವಿಕೆ: ಮುಂದಿನ 15ದಿನಗಳೊಳಗೆ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಲಿಖಿತ ಭರವಸೆ ಅಧಿಕಾರಿಗಳು ನೀಡಿದ್ದಾರೆ. ಪಟ್ಟಣದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಮಹಿಳಾ ವೈದ್ಯರನ್ನು ನೇಮಿಸಿದ್ದು, ಮಹಿಳಾ ವೈದ್ಯರು ಪ್ರತಿದಿನ ಮಧ್ಯಾಹ್ನ 3ರಿಂದ 4ಗಂಟೆಯವರೆಗೆ ಮತ್ತು ತುರ್ತು ಚಿಕಿತ್ಸೆಗೆ ಯಾವುದೇ ಸಮಯದಲ್ಲೂ ಸೇವೆಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಪದವಿ ಕಾಲೇಜಿನಿಂದ ಸರ್ಕಾರಿ ಆಸ್ಪತ್ರೆಗೆ ನೂತನ ಸಿಟಿ ಬಸ್ಸಂಚಾರಕ್ಕೆ ಈಗಾಗಲೇ ತಹಸೀಲ್ದಾರರು ಚಾಲನೆ ನೀಡಿದ್ದಾರೆಂದು ತಿಳಿಸಿದರು.
ಪಟ್ಟಣದ ಮಧ್ಯದಲ್ಲಿರುವ ಬ್ಲೂಸ್ಪಾಟ್ ಬಾರ್ ಮುಚ್ಚಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಾನವಿ ತಾಲೂಕಿನ ತೋರಣ ದಿನ್ನಿ, ಬಾಗಲವಾಡ ಹಾಗೂ ಸಿರಿವಾರದಲ್ಲಿರುವ ಬಾರ್ ಶಾಪ್ಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿರುವ ದಾಖಲಾತಿಗಳನ್ನು ಒಕ್ಕೂಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆಂದು ಹೇಳಿದರು.
ಮದ್ಯ ಸರಬರಾಜಾಗದಿರಲಿ: ಇನ್ನುಳಿದಂತೆ ಅಕ್ರಮ ಮದ್ಯ ಮಾರಾಟ ತಡೆಗೆ ಮಾನವಿ ಪಟ್ಟಣದ ಸುತ್ತ ಪ್ರಮುಖ ಸ್ಥಳಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡುವುದು ಮತ್ತು ತಹಸೀಲ್ದಾರರ ನೇತೃತ್ವದಲ್ಲಿ ಬಾರ್ ಶಾಪ್ ಮಾಲೀಕರ ಸಭೆ ನಡೆಸಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡದಂತೆ ಸೂಚಿಸುವುದಾಗಿ ಎಚ್ಚರಿಸಲಾಗಿದೆ ಎಂದು ತಿಳಿಸಿದರು.
ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟ ಎಂ.ಈರಣ್ಣ, ಅಕ್ಬರ್ ಪಾಷಾ, ಈರಪ್ಪಗೌಡ ಚೀಕಲಪರ್ವಿ ಇವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವುದನ್ನು ಲಿಂಗಸ್ಗೂರು ಮತ್ತು ಮುದಗಲ್ನಲ್ಲಿ ತನಿಖೆ ಕೈಗೊಂಡಂತೆ ತನಿಖೆಯನ್ನು 15ದಿನದೊಳಗಾಗಿ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಲಿಖಿತ ಭರವಸೆ ನೀಡಲಾಗಿದೆ ಎಂದರು. ತಾಲೂಕಿನಾದ್ಯಂತ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಭೂಹೀನ ಬಡರೈತರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲ ಎಂಬ ಭರವಸೆಯೂ ದೊರೆತಿದೆ. ಪಟ್ಟಾ ನೀಡುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದಲ್ಲಿ ಮಿನಿವಿಧಾನಸೌಧವನ್ನು ನಿರ್ಮಿಸಲು ನೀರಾವರಿ ಇಲಾಖೆಯ ಜಾಗೆ ಒದಗಿಸಲು ಜಮೀನು ಪರಿವರ್ತನೆ ಮತ್ತು ಮಂಜೂರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ದಾಖಲಾತಿ ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಲಿಖಿತ ಭರವಸೆ: ನೂತನ ಬಸ್ ನಿಲ್ದಾಣಕ್ಕಾಗಿ ಸೂಕ್ತ ಜಾಗೆ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಹಸೀಲಾರರಿಗೆ ಮತ್ತು ಡಿಪೋ ವ್ಯವಸ್ಥಾಪಕರಿಗೆ ವಹಿಸಲಾಗಿದೆ ಎಂಬ ಅನೇಕ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸುವ ಲಿಖಿತ ಭರವಸೆಯಿಂದಾಗಿ ಮಾನ್ವಿ ಬಂದ್ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಾಜಿದ್ ಖಾದ್ರಿ, ಎಚ್. ನಿಜಾಂ ಪಾಷಾ ವಕೀಲರು, ಎಸ್.ಎಂ. ಶಾನವಾಜ್, ಇಬ್ರಾಹಿಂ ಖುರೇಶಿ, ಶಾಂತಪ್ಪ ಕಪಗಲ್, ಯೇಸಪ್ಪ ಪೋತ್ನಾಳ್, ವಿ. ಮುದುಪ್ಪ ನಾಯಕ, ಅಶೋಕ್ ನಿಲೋಗಲ್, ನರಸಪ್ಪ ಜೂಕೂರು, ಅರಳಪ್ಪ ಯದ್ದಲದಿನ್ನಿ, ಬಸವರಾಜ ಭಂಡಾರಿ, ಮಾರೇಶ ಭಂಡಾರಿ, ರಾಮಣ್ಣ ನಾಯಕ, ರಾಜಾ ವಿಜಯ ಕುಮಾರ್ ನಾಯಕ, ಬಸವರಾಜ ಗಣದಿನ್ನಿ, ಮನೋರಾಜ್ ಕುರ್ಡಿ ಸೇರಿ ಅನೇಕರಿದ್ದರು.