ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಡದಂಡೆ ನೀರಿನ ಸಮಸ್ಯೆ; ಪರಿಹಾರಕ್ಕೆ ಶೀಘ್ರ ಸಭೆ

Vishwanath S
Updated On : 27 Jan 2014, 12:43 pm

ಕನ್ನಡಪ್ರಭ ವಾರ್ತೆ  ರಾಯಚೂರು  ಜ.26
ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ಭಾಗದ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸಕ್ತ ಅಧಿವೇಶನದ ನಂತರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಅವರು ನಗರದಲ್ಲಿ ಗಣರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯಡಿಯ ಕಡೆಯ ರೈತರಿಗೆ ಕಳೆದ ಅನೇಕ ವರ್ಷಗಳಿಂದ ನೀರಿನ ಅಭಾವವಾಗುತ್ತಿದೆ. ಅದರಿಂದ ರೈತರು ಬೆಳೆ ಹಾನಿ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕಿದೆ. ಈ ನಿಟ್ಟಿನಲ್ಲಿ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಹೇಳಿದರು.
ಮಹತ್ವದ ಸಭೆ: ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಅಧಿವೇಶನ ಮುಗಿದ ನಂತರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಸಚಿವರು, ಶಾಸಕರ ಮಹತ್ವದ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರವಾಹ ಸಂದರ್ಭ ವ್ಯರ್ಥವಾಗಿ ಹರಿದು ಹೋಗುವ ನೀರಿನ ಸಮರ್ಪಕ ಬಳಕೆಗೆ ಪ್ರತ್ಯೇಕ ಕಾಲುವೆ ನಿರ್ಮಾಣ ಮಾಡುವುದು, ಸಮಾನಾಂತರ ಜಲಾಶಯಗಳ ನಿರ್ಮಾಣ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲು ಯೋಜಿಸಿದೆ ಎಂದು ತಿಳಿಸಿದರು.
ಹಿಂದುಳಿದ ಹೈ.ಕ. ಭಾಗದ ಜಿಲ್ಲೆಗಳಿಗೆ ಐಟಿಐ ಸಂಸ್ಥೆಗಳ ಮಂಜೂರಾತಿಯಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಅವರು ಮುಂದಿನ ದಿನಗಳಲ್ಲಿ ಅನ್ಯಾಯ ಸರಿಪಡಿಸುವ ಕಾರ್ಯ ಮಾಡುವ ಭರವಸೆ ನೀಡಿದ್ದಾರೆಂದು ಹೇಳಿದರು.
ನೋಟೀಸ್ ಜಾರಿ: ನಗರಕ್ಕೆ ಸಮರ್ಪಕ ಕುಡಿಯುವ ನೀರೊದಗಿಸಲು ತಡೆರಹಿತ ವಿದ್ಯುತ್ ಪೂರೈಕೆಯ ಮಾರ್ಗ ಅಳವಡಿಕೆ ಕಾಮಗಾರಿಯಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಅಕ್ರಮದಲ್ಲಿ ಶಾಮೀಲಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ವೈಫಲ್ಯಕ್ಕೆ ಸಂಬಂಧಿಸಿ ನೋಟೀಸ್ ಜಾರಿ ಮಾಡಲಾಗಿದೆ. ಅಧಿಕಾರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಹೇಳಿದರು. 371ನೇ ಕಲಂ(ಜೆ) ಅಡಿ ನೇಮಕಾತಿ ಸಂದರ್ಭ ಅಭ್ಯರ್ಥಿಗಳಿಗೆ ವಯೋವಾನದ ಮಿತಿಯಲ್ಲಿ ಸಡಿಲಿಕೆ ನೀಡುವ ಬಗ್ಗೆ ಸರ್ಕಾರ ಯೋಜಿಸಿದೆ. ಹೈ.ಕ.ಭಾಗದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಸಂಬಂಧಿಸಿದ ಇಲಾಖೆಗಳಿಂದ ಪಡೆಯುತ್ತಿದ್ದು, ವರದಿ ಪಡೆದು ನೇಮಕಾತಿಗೆ ಚಾಲನೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.
ಅಬಕಾರಿ ಕುರಿತು ಚರ್ಚೆ: ಅಕ್ರಮ ಸೇಂದಿ ತಯಾರಿ ಹಾಗೂ ಮಾರಾಟ ನಿಯಂತ್ರಣಕ್ಕೆ ಪೊಲೀಸ್, ಅಬಕಾರಿ ಮತ್ತಿತರೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಸೇಂದಿ ತಯಾರಿಕೆಗೆ ಬಳಕೆ ಮಾಡುವ ಸಿಎಚ್ ಪೌಡರ್ ಅಕ್ರಮ ಸಾಗಣೆ ತಡೆಗೆ ಆಂಧ್ರ ಸರ್ಕಾರ ಜತೆ ಚರ್ಚಿಸಲಾಗುತ್ತದೆಂದು ಸಚಿವ ಡಾ.ಪಾಟೀಲ್ ತಿಳಿಸಿದರು.
ನಗರದ ರಿಮ್ಸ್ ಬೋಧಕ ಆಸ್ಪತ್ರೆಯನ್ನು ಅದರ ಹೊಸ ಕಟ್ಟಡಕ್ಕೆ ಜ. 26ರಂದೇ ಸ್ಥಳಾಂತರಿಸಲು ಈ ಮೊದಲು ಯೋಜಿಸಲಾಗಿತ್ತು. ಆದರೆ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ಮುಂದಿನ ತಿಂಗಳು ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ. 371ನೇ ಕಲಂ(ಜೆ) ಅಡಿ ವಾಸಸ್ಥಳ ಪ್ರಮಾಣ ಪತ್ರ ನೀಡಿಕೆ  ಗೊಂದಲ ನಿವಾರಿಸಲಾಗಿದೆ. ಸರ್ಕಾರ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದು, ಈ ಭಾಗದವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಶಾಸಕ ಡಾ. ಶಿವರಾಜ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಜಿಪಂ ಸಿಇಒ ವಿಜಯಜೋತ್ಸ್ನಾ, ಎಸ್ಪಿ ಎಂ.ಎನ್. ನಾಗರಾಜ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement