ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾರದರ್ಶಕ ಆಡಳಿತಕ್ಕೆ ಸರ್ಕಾರ ಬದ್ಧ: ಸಚಿವ

Vishwanath S
Updated On : 27 Jan 2014, 12:44 pm

ಕನ್ನಡಪ್ರಭ ವಾರ್ತೆ  ರಾಯಚೂರು  ಜ.26
ಭ್ರಷ್ಟಾಚಾರಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವುದು ಕಾಂಗ್ರೆಸ್ ಸರ್ಕಾರದ ಮೊದಲಾದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ ಸಮಗ್ರ ಪ್ರಗತಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ರಾಜ್ಯದ ಜನರ ಸಹಕಾರ ಅವಶ್ಯ. ಸರ್ಕಾರ ಶಕ್ತಿಮೀರಿ ಸಮರ್ಪಕ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಅಭಿವೃದ್ಧಿಗೆ ಸರ್ವ ಪಕ್ಷ ಸಹಕಾರ ಅಗತ್ಯ: ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಎಲ್ಲ ಪಕ್ಷಗಳ ಸಹಕಾರ ಅವಶ್ಯಕ. ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೃಷಿ, ನೀರಾವರಿಯ ಜತೆ ಜತೆಗೆ ಜಿಲ್ಲೆಯ ಔದ್ಯೋಗಿಕ ಅಭಿವೃದ್ಧಿಗೂ ಸರ್ಕಾರ ಹಂತಹಂತವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಒಪೆಕ್ ಆಸ್ಪತ್ರೆ  ಪುನಾ ಕಾರ್ಯಾರಂಭ ಮಾಡಿದೆ. ಆಸ್ಪತ್ರೆಗೆ ಅಗತ್ಯ ಸೌಲಭ್ಯ ದೊರಕಿಸಿ ಕೊಡುವತ್ತ ಸರ್ಕಾರ ಕಾಳಜಿ ಪ್ರದರ್ಶಿಸಿದೆ. 25 ಲಕ್ಷ ವೆಚ್ಚದಲ್ಲಿ ಒಪೆಕ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಖರೀದಿಸಲಾಗಿದೆ. ಹಾಗೆಯೇ 30 ಲಕ್ಷ ವೆಚ್ಚದಲ್ಲಿ ಕಲರ್ ಡಾಪುಲರ್ ಯಂತ್ರ ಖರೀದಿಸಲಾಗಿದೆ ಎಂದರು.
ವೈದ್ಯಕೀಯ ಸಲಕರಣೆ ಖರೀದಿಗೆ ಕ್ರಮ: ಕಣ್ಣು ಮತ್ತು ಕಿವಿ, ಮೂಗು, ಗಂಟಲು ಚಿಕಿತ್ಸೆ ವಿಭಾಗಕ್ಕೆ ಅತ್ಯಾಧುನಿಕ ಗುಣಮಟ್ಟದ ಮೈಕ್ರೋಸ್ಕೋಪ್ ಒದಗಿಸಲು ಸರ್ಕಾರ ಈಗಾಗಲೇ 6 ಕೋಟಿ ಒದಗಿಸಿದ್ದು, ವಿವಿಧ ವಿಭಾಗಗಳಿಗೆ ಅಗತ್ಯ ವೈದ್ಯಕೀಯ ಸಲಕರಣೆಗಳ ಖರೀದಿಗೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ನಗರದ ರಿಮ್ಸ್ ಬೋಧಕ ಆಸ್ಪತ್ರೆಯನ್ನು ಅದರ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯ ಮುಂದಿನ ತಿಂಗಳು ನಡೆಯಲಿದೆ. ಈಗಾಗಲೇ ಬೋಧಕ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳ ಪೂರೈಕೆಗೆ ಟೆಂಡರ್ ಕರೆದು ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಸಮಗ್ರ ಪ್ರಗತಿಗೆ ಪೂರಕ ಕಾರ್ಯಕ್ರಮ: ಅಭಿವೃದ್ಧಿಯೇ ಆಡಳಿತದ ಮೂಲಮಂತ್ರ ಎಂದು ರಾಜ್ಯ ಸರ್ಕಾರ ನಂಬಿದೆ. ಅದೇ ತತ್ವ ಆಧರಿಸಿ ಆಡಳಿತ ನಿರ್ವಹಿಸಲಾಗುತ್ತಿದೆ. ಮುಂಗಡ ಪತ್ರದಲ್ಲಿ ಭರವಸೆ ನೀಡಿದಂತೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು. ರಾಜ್ಯ ಸರ್ಕಾರ ಕೃಷಿ, ವಾಣಿಜ್ಯ, ಔದ್ಯೋಗಿಕ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಪ್ರಗತಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುತ್ತಿದೆ. 371(ಜೆ)ನೇ ಕಲಂ ಜಾರಿ ಮೂಲಕ ಹೈ.ಕ. ಭಾಗದ ಹಿಂದುಳಿಯುವಿಕೆ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್, ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ಜಿಪಂ ಸಿಇಒ ವಿಜಯ ಜೋತ್ಸ್ನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಸಾಧಕರಿಗೆ ಸನ್ಮಾನ: ಇದಕ್ಕೂ ಮೊದಲು ಜಿಲ್ಲಾ ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ನಾಗರಿಕ ಬಂದೂಕು ತರಬೇತಿ ಪಡೆದ ತಂಡ ಸೇರಿದಂತೆ ಒಟ್ಟು 25 ತಂಡಗಳು ಆಕರ್ಷಕ ಕವಾಯತು ನಡೆಸಿ ಗೌರವ ಸಲ್ಲಿಸಿದವು.     ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಲಾಯಿತು. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ರಸ್ತೆ ಸುರಕ್ಷತಾ ಸಪ್ತಾಹದ ನೆನಪಿನಲ್ಲಿ ಸಂಚಾರ ಠಾಣೆಯಿಂದ ಪ್ರದರ್ಶಿಸಿದ ಸಂಚಾರ ಸುರಕ್ಷತೆಯ ಕುರಿತ ಸ್ತಬ್ಧ ಚಿತ್ರ ಗಮನ ಸೆಳೆಯಿತು.
ಹಿರಿಯರಿಗೆ ಶಾಸಕರಿಂದ ಉಪಚಾರ
ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಗರಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದರಿಂದ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರಿಗೆ ಆರೋಗ್ಯ ತಪಾಸಣೆ ನಡೆಸಿ ಉಪಚರಿಸಿ ನಂತರ ಆಸ್ಪತ್ರೆಗೆ ಕಳಿಸುವ ಮೂಲಕ ಆತಂಕ ದೂರ ಮಾಡಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೊಂಡಮ್ಮ ಎಂಬ ಹಿರಿಯ ನಾಗರಿಕರು ಸಮಾರಂಭ ನಡೆಯುತ್ತಿದ್ದಾಗಲೇ ತೀವ್ರ ಅಸ್ವಸ್ಥಗೊಂಡರು. ಅದರಿಂದ ಕೆಲಕಾಲ ಆತಂಕ ಎದುರಾಗಿತ್ತು.
ಆದರೆ ವೃತ್ತಿಯಲ್ಲಿ ವೈದ್ಯರಾಗಿರುವ ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದರು.
ಅದೇ ವೇಳೆ ಸ್ಥಳಕ್ಕೆ ಧಾವಿಸಿದ ಉಸ್ತುವಾರಿ ಸಚಿವ ಹಾಗೂ ವೈದ್ಯರೂ ಆಗಿರುವ ಡಾ. ಶರಣ ಪ್ರಕಾಶ ಪಾಟೀಲ್ ಅವರು ಕೊಂಡಮ್ಮ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳಿಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement