ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆ

Vishwanath S
Updated On : 28 Jan 2014, 11:35 am

ಕನ್ನಡಪ್ರಭ ವಾರ್ತೆ  ರಾಯಚೂರು  ಜ.27
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಚಿತ್ರಗಳ ಪ್ರವೇಶ ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಡಬ್ಬಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ನೇತಾಜಿ ನಗರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಟ್ಟೆ ಬಜಾರ್ ಮಹಾವೀರ್ ಸರ್ಕಲ್, ಚಂದ್ರಮೌಳೇಶ್ವರ ವೃತ್ತದ ಮೂಲಕ ಪೂರ್ಣಿಮಾ ಚಿತ್ರಮಂದಿರ ತಲುಪಿ ಡಬ್ಬಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಭಾಷೆ, ಸಂಸ್ಕೃತಿಗೆ ಹಾನಿ: ನಂತರ ಹೋರಾಟಗಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಚಿತ್ರಗಳ ಪ್ರವೇಶವಾದಲ್ಲಿ ಅದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡಬ್ಬಿಂಗ್‌ನಿಂದ ಭಾಷಾ ವೈವಿಧ್ಯತೆ ಮತ್ತು ದೇಸೀತನದ ಸೊಗಡು ಮಾಯವಾಗಲಿದೆ. ಹಾಗೆಯೇ ಅವಾಂತರದಲ್ಲಿ ಭಾಷೆಯ ವಿರೂಪ ಮತ್ತು ಅಪಮಾನವಾಗುವ ಎಲ್ಲ ಸಾಧ್ಯತೆಯಿದೆ. ಏಕತಾನತೆಯ ಭಾಷಾ ಪ್ರಯೋಗದಿಂದ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ಪರಸ್ಪರ ಸಂಬಂಧಗಳಿಂದ ದೂರವಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯಾಪಾರೀಕರಣ ಉದ್ದೇಶದಿಂದ ಡಬ್ಬಿಂಗ್: ಡಬ್ಬಿಂಗ್ ಚಿತ್ರಗಳಲ್ಲಿ ಸೃಜನಶೀಲತೆಗೆ ಅವಕಾಶವಿರುವುದಿಲ್ಲ. ಪ್ರತಿಭೆಗಳು ಅವಕಾಶ ವಂಚಿತರಾಗಲಿದ್ದಾರೆ. ಡಬ್ಬಿಂಗ್ ಮಾಡುವ ಉದ್ದೇಶ ಕೇವಲ ವ್ಯಾಪಾರೀಕರಣಲಾಗಿದೆಯೇ ವಿನಾ ಬೇರಾವ ಉದ್ದೇಶವಲ್ಲ ಎಂದು ದೂರಿದ ಹೋರಾಟಗಾರರು, ಇದರಿಂದಾಗಿ ಕಲಾವಿದರು. ತಂತ್ರಜ್‌ಞರು, ಸಾಹಿತಿಗಳು, ಕಾರ್ಮಿಕರು ನಿರುದ್ಯೋಗಿಗಳಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆರೋಪಿಸಿದರು. ಕನ್ನಡ ಚಿತ್ರರಂಗವು ಈಗಾಗಲೇ ಪರಭಾಷೆ ಚಿತ್ರಗಳ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಮಾಡಿಕೊಟ್ಟಲ್ಲಿ, 100 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗ  ಅವನತಿಯ ಹಾದಿ ಹಿಡಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲ ಕನ್ನಡಿಗರೇ ಅಪಾಯಕಾರಿ: ಡಬ್ಬಿಂಗ್‌ನಿಂದ ಬೇರೆ ಭಾಷೆ ಚಿತ್ರಗಳನ್ನು ಗ್ರಾಂಥಿಕ ಕನ್ನಡದಲ್ಲಿ ವೀಕ್ಷಿಸಬಹುದು. ಅದೇ ರೀತಿ ವೈಜ್ಞಾನಿಕ ಮತ್ತು ಇತರೆ ಚಿತ್ರಗಳನ್ನು ಕಿರುತೆರೆಯಲ್ಲಿ ವೀಕ್ಷಿಸಲು ಮಾತ್ರ ಅವಕಾಶವಾಗಲಿದೆ. ಕನ್ನಡ ಭಾಷೆಯ ಚಿತ್ರಗಳಿಗೆ ಕೆಲ ಕನ್ನಡಿಗರೇ ಹೆಚ್ಚು ಅಪಾಯಕಾರಿ ಎಂಬಂಥ ಪರಿಸ್ಥಿತಿಯಿದೆ ಎಂದು ಟೀಕಿಸಿದರು.
1970ರ ದಶಕದಲ್ಲಿ ಡಾ. ರಾಜಕುಮಾರ, ಉದಯಕುಮಾರ, ಕಲ್ಯಾಣಕುಮಾರ, ನರಸಿಂಹರಾಜು, ಬಾಲಕೃಷ್ಣ ರಂಥ ಮಹಾನ್ ವ್ಯಕ್ತಿಗಳು ಹೋರಾಟದ ಕಣಕ್ಕಿಳಿದು ಅಂದಿನ ಸರ್ಕಾರದ ಗಮನ ಸೆಳೆದು ಡಬ್ಬಿಂಗ್‌ಗೆ ಅವಕಾಶ ನೀಡದಂತೆ ಮಾಡಿದ್ದರು ಎಂದು ಹೇಳಿದರು.
ಇತ್ತೀಚೆಗೆ ಉತ್ತಮ ಅಭಿರುಚಿಯ ಚಿತ್ರಗಳು ತಯಾರಾಗುತ್ತಿದ್ದು, ಕನ್ನಡ ಚಿತ್ರರಂಗದೊಂದಿಗೆ ಉತ್ತಮ ಸಾಹಿತ್ಯದ ರಚನೆಗೂ ದಾರಿಯಾಗಿದೆ. ಅನೇಕ ಪ್ರತಿಭಾವಂತ ನಟರು ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬರುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶಗಳಿದ್ದು, ಹಾಗೊಂದು ವೇಳೆ ಕನ್ನಡಿಗರು ಕನ್ನಡ ಚಿತ್ರಗಳಿಗೆ ಬೆಂಬಲಿಸದಿದ್ದಲ್ಲಿ ಮರಾಠಿ, ಗುಜರಾತಿ, ಪಂಜಾಬಿ ಭಾಷೆಯ ಚಿತ್ರರಂಗದಂತೆ ಕನ್ನಡ ಚಿತ್ರರಂಗವು ಅಸ್ತಿತ್ವ ಕಳೆದುಕೊಳ್ಳುವಂಥ ಸ್ಥಿತಿಯಲ್ಲಿರುತ್ತಿತ್ತು ಎಂದು ದೂರಿದರು.
ಕೆಲ ನಿರ್ಮಾಪಕರ ಅರ್ಥವಿಲ್ಲದ ವಾದ: ಕನ್ನಡ ಭಾಷೆಯ ಉಳಿವಿಗೆ ಚಿತ್ರರಂಗದ ಕೊಡುಗೆ ಅಪಾರ. ಕನ್ನಡ ಸಿನೆಮಾ ಮತ್ತು ಸಾಹಿತ್ಯ ಬಹುದೊಡ್ಡ ಕೊಡುಗೆ ನೀಡಿದ್ದು, ಕೆಲವೇ ಕೆಲ ಡಬ್ಬಿಂಗ್‌ಪರ ನಿರ್ಮಾಪಕರ ಅರ್ಥವಿಲ್ಲದ ವಾದಕ್ಕೆ ನಿರ್ಮಾಪಕರೇ ತೊಂದರೆಗೆ ಸಿಲುಕಬೇಕಾಗುತ್ತದೆ ಎಂಬ ಅರಿವಿಲ್ಲ ಎಂದು ಟೀಕಿಸಿದರು.
ಕಾರಣ ಕೂಡಲೇ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಡಬ್ಬಿಂಗ್ ಹಾವಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ಭಾಷೆ ಮತ್ತು ಕನ್ನಡಚಿತ್ರರಂಗವನ್ನು ರಕ್ಷಿಸುವ ಕಾರ್ಯ ಮಾಡಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
್ಲ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್, ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ರಘುವೀರ ನಾಯಕ, ಮಲ್ಲು, ಬುಸಪ್ಪ, ತಾಯಣ್ಣ, ಸುರೇಶ್ ಸಾಹುಕಾರ್, ನಾಗೇಶ್ ಬಿಚ್ಚಾಲಿ, ಜನಾರ್ದನ, ಹುಸೇನಪ್ಪ ಬಿಜನಗೇರಾ, ರಾಮಾಂಜಿ, ಫಿರೋಜ್, ಅಜೀಜ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement