ಫೆ.2ರಂದು ಆರಾಧನಾ ಮಹೋತ್ಸವ
ರಾಯಚೂರು: ದೇವದುರ್ಗ ತಾಲೂಕಿನ ದೇವರ ಗುಂಡಗುರ್ತಿಯ ಮೈಲಾರಲಿಂಗೇಶ್ವರ ಶರಣ ಸಂಸ್ಥಾನದಲ್ಲಿ ಫೆ.2ರಿಂದ ಆರಾಧನಾ ಮಹೋತ್ಸವ, ಮೂರ್ತಿ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಹಾಗೂ ಗುರುಕುಲ ಶಿಕ್ಷಣ ಸಂಸ್ಥೆಯ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ.
ಫೆ. 2ರಂದು ಆರಾಧನಾ ಮಹೋತ್ಸವ ಜರುಗಲಿದೆ. ಫೆ.3ರಂದು ಮೂರ್ತಿ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಮತ್ತು ಶರಣ ಹೊನ್ನಯ್ಯ ತಾತಾ ಗುರುಕುಲ ಶಿಕ್ಷಣ ಸಂಸ್ಥೆಯ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಶಾಂತಮಲ್ಲ ಶಿವಾಚಾರ್ಯರು, ಪಂಚಾಕ್ಷರಿ ಸ್ವಾಮೀಜಿ, ಬೂದಿಬಸವೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.
ಶಿಕ್ಷಣ ಸಂಸ್ಥೆ ಉದ್ಘಾಟನೆ: ಕಾರ್ಯಕ್ರಮದಲ್ಲಿ ಶರಣ ಹೊನ್ನಯ್ಯ ತಾತಾ ಗುರುಕುಲ ಶಿಕ್ಷಣ ಸಂಸ್ಥೆಯನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸಚಿವ ಶಿವನಗೌಡ ನಾಯಕ ವಹಿಸಲಿದ್ದಾರೆ.
ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಶ್ರೀಗಳ ಕ್ಯಾಲೆಂಡರ್ ಬಿಡುಗಡೆ ಮಾಡುವರು.ದೇವದುರ್ಗ ಶಾಸಕ ವೆಂಕಟೇಶ ನಾಯಕ ಅವರು ಹೊನ್ನಯ್ಯ ತಾತಾನವರ 108 ನಾಮಾವಳಿ ಕೈಪಿಡಿ ಬಿಡುಗಡೆಗೊಳಿಸಲಿದ್ದು, ಮಾಜಿ ಸಚಿವ ಸೋಮಣ್ಣ ಅವರು ಶ್ರೀಗಳ ಧ್ವನಿಸುರುಳಿ ಬಿಡುಗಡೆಗೊಳಿಸಲಿದ್ದಾರೆಂದು ಸಂಸ್ಥಾನಮಠದ ಪ್ರಕಟಣೆ ತಿಳಿಸಿದೆ. ಮುಖ್ಯ ಅತಿಥಿಗಳಾಗಿ ಸಚಿವ ಬಾಬುರಾವ್ ಚಿಂಚನಸೂರು, ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ, ಅಮರೇಗೌಡ ಬಯ್ಯಾಪುರ, ಎಂ.ಎಸ್.ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದರು, ದೇವದುರ್ಗ ತಾಲೂಕಿನ ಪ್ರಮುಖರು ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಂಸ್ಥಾನಮಠದ ಪ್ರಕಟಣೆ ತಿಳಿಸಿದೆ.
ಭಕ್ತಿ ಸಂಗೀತ: ಫೆ.2ರಂದು ಸಂಜೆ ಭಕ್ತಿಸಂಗೀತ ಆಯೋಜಿಸಿದ್ದು ರಾಯಚೂರಿನ ಶರಣಪ್ಪ ಗೋನಾಳ ಮತ್ತು ಸಂಗಡಿಗರ ಹಾಡುಗಾರಿಕೆ, ಫೆ.3ರಂದು ಬೆ.5.30ರಿಂದ 8.30ರವರೆಗೆ ಶ್ರೀಮಲ್ಲಿಕಾರ್ಜುನ ತಾತಾನವರ ಮೂರ್ತಿ ಪ್ರತಿಷ್ಠಾಪನೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12.33ಕ್ಕೆ ಸಾಮೂಹಿಕ ವಿವಾಹ ಹಾಗೂ ಗುರುಕುಲ ಶಿಕ್ಷಣ ಸಂಸ್ಥೆ ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದೆ.