ಸಮರ್ಪಕ ನೀರಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ದೇವದುರ್ಗ ಜ.27
ನಾರಾಯಣಪುರ ಬಲದಂಡೆಯ 17 ಮತ್ತು 18ನೇ ವಿತರಣಾ ಕಾಲುವೆಗಳಿಗೆ ಸಮರ್ಪತಕ ನೀರು ಹರಿಸುವುದು ಹಾಗೂ 15ನೇ ವಿತರಣಾ ಕಾಲುವೆಯಲ್ಲಿ ತಡೆಗೋಡೆ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಗಬ್ಬೂರು ಭಾಗದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಚಿಕ್ಕಹೊನ್ನಕುಣಿಯ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ನಾರಾಯಣಪುರ ಬಲದಂಡೆ ಕಾಲುವೆಯ 17 ಮತ್ತು 18ನೇ ವಿತರಣಾ ಕಾಲುವೆಗಳ ವ್ಯಾಪ್ತಿಯಲ್ಲಿ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಆರೋಪಿಸಿದರು.
ನೀರಿಲ್ಲದೆ ಬೆಳೆ ಹಾನಿ: ರೈತರು ಎದುರಿಸುತ್ತಿರುವ ಈ ಸಮಸ್ಯೆ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರಿತ್ತರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ, ರೈತರು ಬೆಳೆದ ಮೆಣಸಿನಕಾಯಿ, ಶೇಂಗಾ ಮತ್ತಿತರೆ ಬೆಳೆಗಳು ನೀರಿಲ್ಲದೇ ಹಾನಿಗೀಡಾಗುತ್ತಿದ್ದು ಅಧಿಕಾರಿಗಳು ಈ ಕೂಡಲೇ ಸಮರ್ಪಕ ನೀರೊದಗಿಸುವಂತೆ ಒತ್ತಾಯಿಸಿದರು.
ಈ ವೇಳೆ ಅಧಿಕಾರಿಗಳ ಅನುಚಿತ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.
ಭರವಸೆ: ರೈತರ ಸಮಸ್ಯೆ ಆಲಿಸಿದ ಅಧಿಕಾರಿಗಳು ಮುಂದಿನ ಒಂದು ವಾರದಲ್ಲಿ ರೈತರ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರೈತರಿಗೆ ಸಮರ್ಪಕ ನೀರು ಹರಿಸುವುದಾಗಿ ಇಇ ಆಂಜನೇಯ ಲಿಖಿತ ಭರವಸೆ ನೀಡಿದರು.
ಗಬ್ಬೂರು ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಕಾಲುವೆಯ ಮೇಲ್ಭಾಗದ ರೈತರು ಕಾಲುವೆಗಳಿಗೆ ಉಸುಕಿನ ಚೀಲ ಅಡ್ಡಲಾಗಿ ಹಾಕಿ ನೀರು ಮುಂದೆ ಸಾಗದಂತೆ ಮಾಡುತ್ತಿರುವ ಬಗ್ಗೆ ಹಾಗೂ ಕೆಲವೆಡೆ ಗೇಟ್ ಕಿತ್ತಿ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ವಿವರಿಸಿದರು.
ಸಮರ್ಪಕ ನೀರೊದಗಿಸುವ ಭರವಸೆ: ಕಾಲುವೆ ನೀರು ಬಳಸಿಕೊಳ್ಳುವ ರೈತರು ತಮ್ಮ ಅವಶ್ಯಕತೆ ಮುಗಿದ ನಂತರ ಬೇರೆಯವರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ನೀರನ್ನು ವ್ಯರ್ಥವಾಗಿ ಹರಿಬಿಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇದರಿಂದ ಕೆಳಭಾಗದ ರೈತರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಚನೆ ನೀಡಿ ಸಮರ್ಪಕ ನೀರೊದಗಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಶರಣಬಣ್ಣ ಸಾಹು ಗಬ್ಬೂರು, ಜೆ.ಬೂದೆಣ್ಣ ಗೌಡ, ಶರಣಗೌಡ ಪಾಟೀಲ್, ಕೆ.ಬಿಬ್ಬನಗೌಡ, ನಾಗರಾಜ ಅಕ್ಕರಕಿ, ದೇವಿಂದ್ರಪ್ಪ ಗೌಡ ಹಂಚಿನಾಳ, ಶರಣಪ್ಪ ಸಾಹು ಸುಂಕೇಶ್ವರಹಾಳ, ಅಶೋಕ ರಡ್ಡಿ ಸೇರಿ ಅನೇಕ ರೈತರಿದ್ದರು.