ಸರ್ಕಾರದ ನೀತಿಗೆ ರೈತಸಂಘ ಆಕ್ರೋಶ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜ.27
ಕೃಷಿ ಉತ್ಪನ್ನಗಳಾದ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸದ ಸರ್ಕಾರದ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸತ್ಯಾಗ್ರಹ ಆರಂಭಿಸಿದ ರೈತರು, ಕೃಷಿ ಉತ್ಪನ್ನಗಳು ವಿಶೇಷವಾಗಿ ದ್ವಿದಳ ಧಾನ್ಯಗಳಾದ ಕಡಲೆ, ತೊಗರಿ ಹಾಗೂ ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದರೂ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸದೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇತ್ತೀಚಿಗೆ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ ಈಗಾಗಲೇ ಶೇ.70 ರಷ್ಟು ರೈತರು ಮಾರಾಟ ಮಾಡಿದ್ದಾರೆ. ಉಳಿದ ಶೇ.30 ರಷ್ಟು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೊಗರಿ ಗುಣಮಟ್ಟ ಪರೀಕ್ಷೆ ಮತ್ತು ಒಂದೇ ರೀತಿ ಕಾಳು ಇರಬೇಕೆಂದು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡದೆ ಎಲ್ಲ ರೈತರ ತೊಗರಿ ಖರೀದಿಸಬೇಕೆಂದು ಒತ್ತಾಯಿಸಿದರು.
6450ಕ್ಕೆ ಖರೀದಿಸಿ: ಸರ್ಕಾರ ನಾಫೆಡ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಎಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಸೇರಿದಂತೆ ನಿಗಮಗಳ ಮೂಲಕ ತೊಗರಿಗೆ 6450ಕ್ಕೆ ಖರೀದಿಸಬೇಕು. ಕೇಂದ್ರ ಸರ್ಕಾರ ಕಡಲೆಗೆ ಬೆಲೆ ನಿಗದಿ ಪಡಿಸದ ಪರಿಣಾಮ 2500 ರಿಂದ 2800 ವರೆಗೆ ಖರೀದಿಸಲಾಗುತ್ತಿದೆ. ಸೂರ್ಯಕಾಂತಿ 3000 ದಿಂದ 3200 ವರೆಗೆ ಖರೀದಿಸಲಾಗುತ್ತಿದೆ. ಶೇಂಗಾ 2500 ರಿಂದ 2800 ವರೆಗೆ ಖರೀದಿಸಲಾಗುತ್ತಿದೆ. ಇದರಿಂದ ರೈತರು ನಷ್ಟಕ್ಕೀಡಾಗಲಿದ್ದು, ಕೂಡಲೇ ಸರ್ಕಾರ ಈ ಎಲ್ಲ ಬೆಳೆಗಳಿಗೆ ಕನಿಷ್ಟ 5000 ಬೆಲೆಗೆ ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕು.
ವಿದ್ಯುತ್ ಪೂರೈಕೆ ಮಾಡಿ: ಸರ್ಕಾರ ಕೃಷಿ ಉತ್ಪನ್ನಗಳಾದ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಿಗೆ ಬೆಲೆ ನಿಗದಿ ಪಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದು, ಇದಕ್ಕೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ವರದಿ ನೀಡದಿರುವುದೇ ಪ್ರಮುಖ ಕಾರಣ. ಕೂಡಲೇ ಸರ್ಕಾರ ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಿಗೆ ಬೆಲೆ ಘೋಷಿಸಬೇಕು. ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಿ, ಪಂಪ್ಸೆಟ್ಗಳಿಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮುಖಂಡರಾದ ಸಂಗಣ್ಣ ಮುದಗಲ್, ಗ್ಯಾನಪ್ಪ ಗುಡಿಹಾಳ, ಚಂದಾವಲಿ ಮುದಗಲ್, ಹೊಳೆಯಪ್ಪ ಕನ್ನಾಪೂರಹಟ್ಟಿ, ಶರಣಬಸವ ಫೂಲಬಾವಿ ಉಪವಾಸ ಸತ್ಯಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಸಲಹಾ ಸಮಿತಿ ಮುಖಂಡ ಮಹಾಂತಪ್ಪ ವಿಟ್ಲಾಪೂರ, ತಾಲೂಕು ಅಧ್ಯಕ್ಷ ಸಿದ್ದೇಶ ಗೌಡೂರು, ಮುಖಂಡರಾದ ಸಿದ್ದಲಿಂಗೇಶ್ವರ ಪಾಟೀಲ್, ಸಿದ್ದರಾಮಯ್ಯಸ್ವಾಮಿ ಸಿಂಧನೂರ, ಅಮರಯ್ಯಸ್ವಾಮಿ ಹುಲಿಗುಡ್ಡ, ಅಮರೇಶ ಬೆಣ್ಣೆ, ವಿರುಪನಗೌಡ ಬನ್ನಿಗೋಳ, ಪೀರಸಾಬ ಬನ್ನಿಗೋಳ, ಶಿವಣ್ಣ ಭೂಪೂರ, ಬಸನಗೌಡ ಮಟ್ಟೂರ, ಹುಲಿಗೆಯ್ಯ ಯಾಪಲದಿನ್ನಿ, ಆಲಂಸಾಬ, ರಾಚಯ್ಯಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.
ಬೆಂಬಲ: ಸರ್ಕಾರದ ವಿರೋಧಿ ನೀತಿ ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಆರಂಭಿಸಿದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಮುಖಂಡರಾದ ರಾಜೇಶ ಮಾಣಿಕ್, ನಾಗರಾಜ ತಿಪ್ಪಣ್ಣ, ವೀರಭದ್ರಗೌಡ, ಬಾಬು ನಾಯಕ, ಬಂಗಾರೆಪ್ಪ ಸಾಹುಕಾರ, ವಿನೋದಗೌಡ ಹಾಗೂ ಕನ್ನಡ ಸೇನೆ ಕರ್ನಾಟಕ ಸಂಘಟನೆ ಮುಖಂಡರಾದ ವೀರಭದ್ರಪ್ಪ ನಾಯಕ ಗೌಡೂರು, ಹನುಮಂತ್ರಾಯ ನೆಲೋಗಿ, ಬಸವರಾಜ ಹಿರೇಮಠ, ಬಿ.ಎಸ್. ನಾಯಕ, ರಾಮಣ್ಣ ಗೌಡೂರು ಸೇರಿದಂತೆ ರೈತರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.