ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಈ ರಸ್ತೆ ಸಂಚಾರ ದುಸ್ತರ

Vishwanath S
Updated On : 29 Jan 2014, 11:18 am

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಜ.28
ಹೈದ್ರಾಬಾದ್ ಕರ್ನಾಟಕ ಭಾಗದ ಪ್ರಮುಖ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 19ರ ಲಿಂಗಸ್ಗೂರು- ಸಿಂಧನೂರು ರಸ್ತೆ ಸಂಪೂರ್ಣ ಹದಗೆಟ್ಟು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಲಿಂಗಸ್ಗೂರು- ಸಿಂಧನೂರು ಮಧ್ಯದ 55 ಕಿಮೀ ರಾಜ್ಯ ಹೆದ್ದಾರಿಯಲ್ಲಿ ಲಿಂಗಸ್ಗೂರು- ಮಸ್ಕಿ 28 ಕಿಮೀವರೆಗಿನ ರಸ್ತೆಯಲ್ಲಿ ಮಾತ್ರ ಅಲ್ಪಮಟ್ಟಿಗೆ ಡಾಂಬರ್ ಕಂಡುಬಂದರೂ ಉಳಿದ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗುಗಳು ನಿರ್ಮಾಣಗೊಂಡಿವೆ. ವಾಹನಗಳು ನೃತ್ಯ ಮಾಡುತ್ತಾ ಸಂಚರಿಸಬೇಕಿದೆ. ಇನ್ನು ಮಸ್ಕಿ- ಸಿಂಧನೂರು 27 ಕಿಮೀ ರಸ್ತೆ ಹಣೆಬರಹ ಹೇಳ ತೀರದು. ರಸ್ತೆ ಮೇಲಿನ ಡಾಂಬರ್ ಸಂಪೂರ್ಣ ಕೊಚ್ಚಿ ಹೋಗಿದ್ದು, ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ವಾಹನಗಳ ಸಂಚಾರದಿಂದ ಧೂಳು ತುಂಬಿದ ವಾತಾವರಣ ಸಂಕಟಕ್ಕೀಡು ಮಾಡಿದೆ.
ಇಲಾಖೆ ನಿಯಮ ಲೆಕ್ಕಕ್ಕಿಲ್ಲ: ಲಿಂಗಸ್ಗೂರು- ಸಿಂಧನೂರು ರಸ್ತೆ 10 ಟನ್‌ಗಿಂತ ಕಡಿಮೆ ಭಾರದ ವಾಹನಗಳ ಸಂಚಾರಕ್ಕೆ ಯೋಗ್ಯವೆಂದು ಲೊಕೋಪಯೋಗಿ ಇಲಾಖೆ ತಿಳಿಸಿದ್ದರೂ 20- 30 ಟನ್ ಭಾರದ ವಾಹನಗಳು ಸಂಚರಿಸುತ್ತವೆ. ರಸ್ತೆ ಮೇಲೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, 55 ಕಿಮೀ ದೂರ ಕ್ರಮಿಸಲು 2- 3 ಗಂಟೆ ಕಾಲ ಸರ್ಕಸ್ ಮಾಡಬೇಕಿದೆ. ಇನ್ನು ಲಘು ವಾಹನಗಳು ರಸ್ತೆ ಮೇಲೆ ಸಂಚರಿಸುವನ್ನೇ ಬಿಟ್ಟಿದ್ದಾರೆ. ಚಾಲಕರು, ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರೆ, ವಾಹನಗಳು ಒಂದಿಲ್ಲೊಂದು ದುರಸ್ತಿ ಕಾರ್ಯಕ್ಕೆ ಬರುವುದು ಸಹಜ ಪ್ರಕ್ರಿಯೆಯಾಗಿದೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ, ಹೋರಾಟ, ಪ್ರತಿಭಟನೆ ನಡೆಸಿದರೂ ಸರ್ಕಾರ ಗಮನ ಹರಿಸಿಲ್ಲ. ಚುನಾಯಿತ ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ.
ಬರೀ ತಾತ್ಕಾಲಿಕ ತೇಪೆ ಕಾರ್ಯ: ಸಿಂಧನೂರು, ಮಸ್ಕಿ ಅಥವಾ ಲಿಂಗಸ್ಗೂರು ಪಟ್ಟಣಗಳಿಗೆ ಮುಖ್ಯಮಂತ್ರಿ ಅಥವಾ ಸಚಿವರು ಆಗಮಿಸುವ ವೇಳೆ ಮಾತ್ರ ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚಿ ತೇಪೆ ಎಳೆಯುವ ಕಾರ್ಯ ಕೈಗೊಳ್ಳಲಾಗುತ್ತದೆ. ನಂತರ ಪ್ರಯಾಣಿಕರು ಹಾಗೂ ಚಾಲಕರ ಗೋಳು ತಪ್ಪಿದ್ದಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಮಸ್ಕಿ ಪಟ್ಟಣದಲ್ಲಿ ಜ.10ರಂದು ಮಸ್ಕಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸುವ ಮೂಲಕ ರಸ್ತೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಲಾಯಿತು.
ಅಧಿಕಾರಿಗಳ ಸ್ಪಷ್ಟನೆ: ಲಿಂಗಸ್ಗೂರು- ಸಿಂಧನೂರು ರಸ್ತೆ ಕಾಮಗಾರಿಗೆ ಕೆಆರ್‌ಡಿಸಿಎಲ್ ಟೋಲ್ ವ್ಯವಸ್ಥೆಗೆ 4 ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಗುತ್ತಿಗೆದಾರರು ಮುಂದೆ ಬಾರದ ಕಾರಣ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿ ಜವಬ್ದಾರಿ ನೀಡಿದ್ದು, ಸಂಪೂರ್ಣ ಸರ್ವೆಕಾರ್ಯ ಕೈಗೊಂಡು ಅಂದಾಜು ಪತ್ರಿಕೆ ತಯಾರಿಸುವಂತೆ ಆದೇಶ ನೀಡಿದೆ.
ಲಿಂಗಸ್ಗೂರು- ಸಿಂಧನೂರು ರಸ್ತೆ ಪುನರ್ ನಿರ್ಮಾಣ ಕಾಮಗಾರಿಗೆ 82 ಕೋಟಿ ಮಂಜೂರಾತಿ ದೊರೆತಿದ್ದು, ಹಣಕಾಸು ಇಲಾಖೆ ಅನುಮತಿಗೆ ಕಳುಹಿಸಲಾಗಿದೆ. ಅಲ್ಲಿಯವರೆಗೆ ಲಿಂಗಸ್ಗೂರು-ಮುದಬಾಳ 19 ಕಿಮೀ ರಸ್ತೆಗೆ 60 ಲಕ್ಷ ಹಾಗೂ ಮಸ್ಕಿಯಿಂದ ತುಂಗಭದ್ರಾ ಮುಖ್ಯ ಕಾಲುವೆವರೆಗೆ 20 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಹೈ-ಕ ಭಾಗದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 19ರ ಲಿಂಗಸ್ಗೂರು- ಸಿಂಧನೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಸಂಚಾರಕ್ಕೆ ಬಾರದಂತಾಗಿದ್ದು, ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಶೀಘ್ರ ಕಾಮಗಾರಿ ಆರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.


-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement