ಹಣದ ಬೇಡಿಕೆ; ಲೋಕಾ ಬಲೆಗೆ ಪಿಎಸ್ಐ
ಲಿಂಗಸ್ಗೂರು: ಪಟ್ಟಣದ ಖಾಸಗಿ ವಾಹನ ಬಿಡುಗಡೆ ವಿಷಯಕ್ಕೆ ಸಂಬಂಧಿಸಿ ಹಣದ ಬೇಡಿಕೆ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಎಸ್ಐ ಖಾಜಾಹುಸೇನ್ ಹಾಗೂ ಠಾಣೆಯ ಬರಹಗಾರ ಬಸನಗೌಡ ಎಂಬುವವರನ್ನು ಬಂಧಿಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಸ್ಥಳೀಯ ಅಖ್ತರ್ ಹುಸೇನ್ ಎಂಬುವರ ಟಂಟಂ ವಾಹನ ಅಪಘಾತಕ್ಕೀಡಾಗಿ ಠಾಣೆಯಿಂದ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಖ್ತರ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಅಖ್ತರ್ ಹಣ ನೀಡಲು ಆಗಮಿಸಿದ ವೇಳೆ ದಾಳಿ ನಡೆಸಲಾಯಿತು. ಆದರೆ ಪಿಎಸ್ಐ ಖಾಜಾಹುಸೇನ್ ಹಾಗೂ ಠಾಣೆ ಬರಹಗಾರ ಬಸನಗೌಡ ಅಖ್ತರ್ ಹುಸೇನ್ರಿಂದ ಹಣ ಪಡೆಯಲು ತಿರಸ್ಕರಿಸಿದ್ದಾರೆ.
ಅಖ್ತರ್ ಅವರ ದೂರು ಆಧರಿಸಿ ಪಿಎಸ್ಐ ಖಾಜಾ ಹುಸೇನ್ ಹಾಗೂ ಠಾಣೆ ಬರಹಗಾರ ಬಸನಗೌಡ ಎಂಬುವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಎ.ಎಚ್. ಚಿಪ್ಪಾರ್ ತಿಳಿಸಿದ್ದಾರೆ. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎಸ್.ಬಿ. ಪಾಟೀಲ್, ಇನ್ಸ್ಪೆಕ್ಟರ್ ಲಿಂಗಪ್ಪ, ಪೊಲೀಸರಾದ ದೌಲತ್, ತಿಮ್ಮಪ್ಪ, ಯಂಕಪ್ಪ, ಕುಮಾರ, ಅಮರೇಶ, ವೆಂಕಟಗಿರಿ ಇದ್ದರು.