ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಬಯಲಿಗೆ ಎಳೆಯುವಲ್ಲಿ ವಿಳಂಬ; ದೂರು

Lingaraj Badiger
Updated On : 30 Jan 2014, 10:55 am

ರಾಯಚೂರು: ಸ್ಥಳೀಯ ನಗರಸಭೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವಿಧ ಸಂಘಟನೆಗಳ ಒಕ್ಕೂಟದ ನಿಯೋಗ ದೂರು ಸಲ್ಲಿಸಿದೆ.
ನಗರದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿರುವ ಸಂಘಟನೆಗಳ ಪ್ರಮುಖರು, ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಜನಪರ ಸಂಘಟನೆಗಳು ಹೋರಾಡುತ್ತಿವೆ. ಆರೋಪ ಸಾಬೀತಾಗಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿದರು.
ನಗರಕ್ಕೆ ನಿರಂತರ ಸಮರ್ಪಕ ಕುಡಿಯುವ ನೀರೊದಗಿಸುವ ಯೋಜನೆಗೆ ಸಂಬಂಧಿಸಿ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆಯಲ್ಲಿನ ಅಕ್ರಮ ನಡೆದಿರುವುದು ಸಹಾಯಕ ಆಯುಕ್ತರಾಗಿದ್ದ ಮಂಜುಶ್ರೀ ಅವರ ವರದಿಯಲ್ಲಿ ಸಾಬೀತಾಗಿದೆ. ಆದರೆ ಅಧಿಕಾರಿಗಳ ವಿರುದ್ಧ ಇದುವರೆಗೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಅದೇ ರೀತಿ ನಗರಸಭೆಯಲ್ಲಿ ಶೇ.22.75ರ ಅನುದಾನದ ಬಳಕೆಯಲ್ಲಿಯೂ ಅಕ್ರಮ ನಡೆದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ನಗರದಲ್ಲಿ 48 ಅಕ್ರಮ ಬಹುಮಹಡಿ ಕಟ್ಟಡಗಳಿದ್ದು ಅವುಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಲ್ಲ ಎಂದು ಆರೋಪಿಸಿದರು.
ನವೋದಯ ಶಿಕ್ಷಣ ಸಂಸ್ಥೆಯಿಂದ ನಡೆದಿರುವ ಕೋಟ್ಯಂತರ ರು. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಲ್ಲಿಯೂ ವಿಳಂಬ ಮಾಡುತ್ತಿರುವುದು ಅನುಮಾನಕ್ಕೆ ದಾರಿಯಾಗಿದೆ. ಕಾರಣ ಕೂಡಲೇ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಫೆ.3ರಿಂದ ವಿವಿಧ ಸಂಘಟನೆಗಳು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿವೆ ಎಂದು ಪ್ರಮುಖರಾದ ಅಂಬಣ್ಣ ಅರೋಲಿಕರ್, ಅಶೋಕಕುಮಾರ್ ಜೈನ್, ಶಿವುಕುಮಾರ ಯಾದವ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement