ಗೌಡೂರು ತಾಂಡಾ ಬಾಲಕಿ ಸಾವು; ನಿಜವಾದ ಆರೋಪಿಗಳ ಪತ್ತೆಗೆ ಆಗ್ರಹ
ಲಿಂಗಸ್ಗೂರು: ಗೌಡೂರು ತಾಂಡಾದ ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ನಿರಪರಾಧಿಗಳನ್ನು ಕೈಬಿಟ್ಟು ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದರು.
ತಾಲೂಕಿನ ಗೌಡೂರು, ಗುರುಗುಂಟಾ, ಹಟ್ಟಿ, ಕೋಠಾ, ಹೊಸಗುಡ್ಡ, ಬಂಡೇಭಾವಿ, ಯರಜಂತಿ, ಪೈದೊಡ್ಡಿ, ಟಣಮನಕಲ್, ಗುಂತಗೋಳ, ಗೋನವಾಟ್ಲ, ದೇವರಭೂಪುರ, ಗೊಲಪಲ್ಲಿ ಗ್ರಾಮಗಳ ಜನರು ಬುಧವಾರ ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಮನವಿ ಸಲ್ಲಿಸಿದರು.
ಗೌಡೂರು ತಾಂಡಾದ ಗುಬ್ಬವ್ವ ತಂದೆ ಮಲ್ಲಪ್ಪ ಕಾರಬಾರಿ ಎಂಬ ಬಾಲಕಿ ಶವ ನಾರಾಯಣಪುರ ಬಲದಂಡೆ ಮುಖ್ಯನಾಲೆಯ ಸೋಮನಮರಡಿ ಜಾಕ್‌ವೆಲ್ ಹತ್ತಿರ ಪತ್ತೆಯಾಗಿದ್ದು, ಇದು ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣವೆಂದು ಸುಳ್ಳು ದೂರು ನೀಡಲಾಗಿದೆ. ಬಾಲಕಿ ಕಾಲು ಜಾರಿ ನಾಲೆಯಲ್ಲಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಆದರೆ ಗೌಡೂರು ಗ್ರಾಮದ ಅಮಾಯಕ ಯುವಕರನ್ನು ಪ್ರಕರಣದಲ್ಲಿ ಸೇರಿಸಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯದೆ ರಾಜಕೀಯ ಪ್ರಭಾವ ಬಳಸಿ ಕೆಲವರನ್ನು ತೇಜೋವಧೆ ಮಾಡಲು ಪ್ರಕರಣವನ್ನು ಮನಬಂದಂತೆ ತಿರುಚಿ ಮುಗ್ಧ ಅಮಾಯಕರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು.
ವಿವಿಧ ಗ್ರಾಮಗಳ ಗ್ರಾಮಸ್ಥರಾದ ರಾಮು ನಾಯಕ ಸುರಪುರ, ಸೋಮನಾಥ ನಾಯಕ ಗುರುಗುಂಟಾ, ಅಮರೇಶ ನಾಯಕ ಗುರುಗುಂಟಾ, ಖಾಜಾಹುಸೇನ, ಗುಂಡಪ್ಪ, ಅಮರೇಶ, ಹನುಮಗೌಡ, ಬಸವರಾಜ, ಶರಣಪ್ಪ, ಬಸವರಾಜ, ಮೌನೇಶ, ರಮೇಶ, ಮಲ್ಲಿಕಾರ್ಜುನ, ಪ್ರಶಾಂತ ಗುರಿಕಾರ, ಮಲ್ಲಿಕಾರ್ಜುನ, ದುರುಗಪ್ಪ, ಮೌನೇಶ ದೇಸಾಯಿ, ದುರುಗಪ್ಪ, ಅಮರೇಶ ನಾಯಕ, ಯಲ್ಲಪ್ಪ ಗೋಸಲ, ರಾಮಣ್ಣ, ಯಮನೂರ, ಅಮರೇಶಗೌಡ, ಭೀಮಣ್ಣ, ಮುತ್ತಣ್ಣ, ತಿಮ್ಮಣ್ಣಗೌಡ, ಶಿವಪ್ಪ, ತಿಮ್ಮಯ್ಯ ಸೇರಿದಂತೆ ನೂರಾರು ಜನರು ಇದ್ದರು. ನಂತರ ಸ್ಥಳೀಯ ಪೊಲೀಸ್ ಉಪ ವಿಭಾಗ ಅಧಿಕಾರಿ ಕಚೇರಿಗೆ ತೆರಳಿ ಡಿವೈಎಸ್‌ಪಿ ಅನಿತಾ ಹದ್ದಣ್ಣವರ್‌ಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘದಿಂದ...: ತಾಲೂಕಿನ ಗೌಡೂರು ತಾಂಡಾದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ನಾಲೆಗೆ ಎಸೆಯಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘದಿಂದ ಬುಧವಾರ ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಯಂಕಮ್ಮ, ಎಸ್‌ಎಫ್‌ಐನ ರಮೇಶ ವೀರಾಪುರ, ಮಹೇಶ, ತಾಂಡಾದ ಮಹಿಳೆಯರಾದ ಈರಮ್ಮ, ಸೀತಮ್ಮ, ಲಚಮಮ್ಮ ಇದ್ದರು.