ನೀರಾವರಿ ಕಚೇರಿಗೆ ಬೀಗ
ಕ.ಪ್ರ. ವಾರ್ತೆ, ರಾಯಚೂರು, ಜ.29
ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದ ರೈತರಿಗೆ ಸಮರ್ಪಕ ನೀರೊದಗಿಸುವಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ವೈಫಲ್ಯ ಖಂಡಿಸಿ ಬುಧವಾರ ನೂರಾರು ರೈತರು ಮಾನವಿ ತಾಲೂಕಿನ ಸಿರವಾರ ಗ್ರಾಮದಲ್ಲಿನ ನೀರಾವರಿ ಇಲಾಖೆಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಎಡದಂಡೆ ಕಾಲುವೆಯ ಮೂಲಕ ನೀರು ದೊರೆಯದಿರುವ ಬಗ್ಗೆ ವಿಚಾರಿಸಲು ಸಿರವಾರದ ನೀರಾವರಿ ಇಲಾಖೆಯ ಕಚೇರಿಗೆ ಆಗಮಿಸಿದ ರೈತರಿಗೆ ಅಲ್ಲಿ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿಯಿಲ್ಲದ್ದನ್ನು ಕಂಡು ಆಕ್ರೋಶಗೊಂಡರು. ಕಚೇರಿಗೆ ಬೀಗ ಹಾಕಿ ಘೋಷಣೆ ಕೂಗಿದರು.
ಎಡದಂಡೆ ಕಾಲುವೆಯ ಕೆಳಭಾಗದ ವಿತರಣೆ ಕಾಲುವೆಗಳಾದ 89, 90, 91, 92 ಸೇರಿದಂತೆ ಇನ್ನಿತರೆ ಉಪಕಾಲುವೆಗಳಿಗೆ ಕಳೆದ ಅನೇಕ ದಿನಗಳಿಂದ ಬೆಳೆಗಳಿಗೆ ನೀರಿಲ್ಲವಾಗಿದೆ. ಅದರಿಂದ ರೈತರು ಬೆಳೆ ಹಾನಿ ಭೀತಿ ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದರೂ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ರೈತರಿಗೆ ನೀರು ದೊರೆಯುತ್ತಿಲ್ಲ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ನೀರಾವರಿ ಅಧಿಕಾರಿಗಳು ರೈತರ ಬೆಳೆಗಳಿಗೆ ನೀರೊದಗಿಸುತ್ತಿಲ್ಲ. ಕಳೆದ ಅನೇಕ ದಿನಗಳಿಂಗ ಹಗಲು ಮತ್ತು ರಾತ್ರಿ ನೀರಿಗಾಗಿ ಕಾದು ಕುಳಿತರೂ ಕಾಲುವೆಯಿಂದ ರೈತರಿಗೆ ನೀರು ದೊರೆತಿಲ್ಲ. ಇದರಿಂದ ಎಡದಂಡೆ ಕಾಲುವೆಯ ಕೆಳಭಾಗದಲ್ಲಿ ರೈತರು ಬೆಳೆದ ಹತ್ತಿ, ಮೆಣಸಿನಕಾಯಿ, ಬತ್ತ ಮತ್ತಿತರೆ ಬೆಳೆ ಸಂಪೂರ್ಣ ಒಣಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ರೈತರ ನಿಯೋಗ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ ವೇಳೆ ಅವರು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮತ್ತು ಎಸ್ಪಿ ಎಂ.ಎನ್. ನಾಗರಾಜ್ ಅವರಿಗೆ ರೈತರ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ನೀರು ದೊರೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಭರವಸೆಯಂತೆಯೇ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ರೈತರಿಗೆ ನೀರು ದೊರೆಯುತ್ತಿಲ್ಲ ಎಂದು ದೂರಿದರು.
ಯಾವುದೇ ಪ್ರಯತ್ನ ನಡೆದಿಲ್ಲ: ಎಡದಂಡೆ ಕಾಲುವೆಯ ಸಿಂಧನೂರು ವ್ಯಾಪ್ತಿಯಲ್ಲಿ ಈಗಾಗಲೇ ಕಾಲುವೆಯ ಮೇಲೆ ಅಕ್ರಮ ನೀರಿನ ಬಳಕೆ ತಡೆಗೆ ಹಾಗೂ ನೀರಿನ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ 144ನೇ ಕಲಂ ಜಾರಿಗೊಳಿಸಲಾಗಿದೆ. ಆದರೆ ಸಿರವಾರ ವ್ಯಾಪ್ತಿಯಲ್ಲಿ ಈ ಬಗ್ಗೆ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಆರೋಪಿಸಿದರು.
ನೀರಾವರಿ ಇಲಾಖೆಯ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಲೇ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದ ರೈತರು, ಕಾಲುವೆಯ ಮೂಲಕ ಮಸ್ಕಿವರೆಗಿನ ರೈತರು ನೀರು ಪಡೆಯುತ್ತಿದ್ದು, ಆನಂತರದಲ್ಲಿಯೇ ನೀರಿನ ಅಕ್ರಮ ಕಳವು ನಡೆಯುತ್ತಿದೆ. ಅದರಿಂದಾಗಿಯೇ ನೀರಿನ ಅಭಾವ ತಲೆದೋರಿದೆ ಎಂದು ದೂರಿದರು.
ಕಾರಣ ಕೂಡಲೇ ರೈತರ ವಿವಿಧ ಬೆಳೆಗಳಿಗೆ ಸಮರ್ಪಕ ನೀರು ಹರಿಸಬೇಕು. ತಪ್ಪಿದಲ್ಲಿ ರೈತರೆಲ್ಲರೂ ಸೇರಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸೂಗಪ್ಪ ಸಾಹುಕಾರ್, ಶರಣಪ್ಪಗೌಡ ಜಾಡಲದಿನ್ನಿ, ರಾಧಾಕೃಷ್ಣ, ವೆಂಕಟರಾವ್, ಗುಂಡಯ್ಯ, ಶಿವಾಜಿರಾವ್ ಸೇರಿದಂತೆ ಅನೇಕ ರೈತರಿದ್ದರು.