ಫೆ.2ರಂದು ಜಾತಿ ವಿರೋಧಿ ಸಮಾವೇಶ ಆಯೋಜನೆ
ರಾಯಚೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಜಾತಿ ಸಂಬಂಧಿಸಿದ ಸಮಾವೇಶಗಳನ್ನು ಆಯೋಜಿಸುತ್ತಿರುವುದು ಖಂಡನೀಯ. ಪಕ್ಷಗಳ ಈ ರೀತಿಯ ವರ್ತನೆ ವಿರೋಧಿಸಿ ಫೆ.2ರಂದು ನಗರದಲ್ಲಿ ಜಾತಿ ವಿರೋಧಿ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಾತಿ ನಿರ್ಮೂಲನಾ ಚಳವಳಿ ಕರ್ನಾಟಕ ಸಂಘಟನೆಯು ರಾಜಕೀಯ ಪಕ್ಷಗಳು ದಲಿತ, ಹಿಂದುಳಿದ ವರ್ಗಗಳು ಸೇರಿ ಎಲ್ಲಾ ಜಾತಿ ಜನಾಂಗದ ಜಾತ್ರೆ ಸಂಘಟಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜಾತಿವಾದಿ ಜಾತ್ರೆಗಳನ್ನು ಅಧಿಕಾರದ ಗದ್ದುಗೆ ಹಿಡಿಯಲು ಸಂಘಟಿಸುತ್ತಿವೆ ಎಂದು ಟೀಕಿಸಿದೆ. ಆಯಾ ಜಾತಿಯ ಸಂಘಟನೆಗಳನ್ನು ವೇದಿಕೆಯನ್ನಾಗಿ ಮತ್ತು ಜಾತಿಯ ಮುಖಂಡರನ್ನು ರಾಜಕೀಯ ಏಜೆಂಟರಾಗಿ ಬಳಸಿಕೊಳ್ಳಲಾಗುತ್ತಿದ್ದು, ಜಾತಿಯನ್ನು ಜಾತಿ ರಾಜಕಾರಣದ ಮೂಲಕ ಮತ್ತಷ್ಟು ಗಟ್ಟಿಗೊಳಿಸುವುದರ ವಿರುದ್ಧ ಜಾತಿ ನಿರ್ಮೂಲನಾ ಚಳವಳಿ ಸಂಘಟನೆಯಿಂದ ಫೆ.2ರಂದು ಬೆಳಗ್ಗೆ 11ಕ್ಕೆ ರಂಗಮಂದಿರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದೆ. ಮಹತ್ವದ ಜಾತಿ ವಿರೋಧಿ ಸಮಾವೇಶದಲ್ಲಿ ಎಲ್ಲ ಪ್ರಗತಿಪರರು, ಜಾತ್ಯತೀತರು, ಎಡಪಂಥಿಯರು, ದಲಿತ ಹಾಗೂ ರೈತ ಸಂಘಟನೆಯ ಕಾರ್ಯಪಟುಗಳು, ಪ್ರಗತಿಶೀಲ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಯೋಜಕರಾದ ಎಚ್. ಎನ್. ಬಡಿಗೇರ್, ಮೋಹನ್ ಹಿಪ್ಪರಗಿ ಮನವಿ ಮಾಡಿದ್ದಾರೆ.