ತ್ಯಾಜ್ಯ ನಿರ್ವಹಣೆ ಘಟಕ: ಪ್ರಭಾವಕ್ಕೆ ಮಣಿಯದಂತೆ ದಸಂಸ ಎಚ್ಚರಿಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜ.30
ನಗರದ ಹೊಸೂರು ಗ್ರಾಮದ ಬಳಿ ನಗರಸಭೆಯಿಂದ ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಉದ್ದೇಶದಿಂದ ಸ್ವಾಧೀನಪಡಿಸಿ ಕೊಂಡ ಪ್ರದೇಶದಲ್ಲಿಯೇ ಘಟಕ ಸ್ಥಾಪಿಸಬೇಕು. ಹಾಗೊಂದು ವೇಳೆ ರಾಜಕೀಯ ಪ್ರಭಾವಕ್ಕೆ ಮಣಿದು ನಗರಸಭೆ ಬೇರೆಡೆ ಘಟಕ ಸ್ಥಾಪಿಸಲು ಮುಂದಾದಲ್ಲಿ ಆ ಜಾಗೆಯಲ್ಲಿ ಹೊಸೂರು ಗ್ರಾಮದ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ದಸಂಸ ಮುಖಂಡ ಕೆ. ವಿರೂಪಾಕ್ಷಿ ಆಗ್ರಹಿಸಿದರು.
ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಡಿಬಿ ನೆರವಿನ ರು. 30ಕೋಟಿ ವೆಚ್ಚದಲ್ಲಿ ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಸುಧಾರಣೆ ಕಾಮಗಾರಿಗೆ ಸಂಬಂಧಿಸಿ ಹೊಸೂರು ಗ್ರಾಮದ ಬಳಿ ನಗರಸಭೆ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಉದ್ದೇಶಿಸಿ ಕೆಲ ವರ್ಷ ಹಿಂದೆ 10ಎಕರೆ ಪ್ರದೇಶ ಸ್ವಾಧೀನಪಡಿಸಿಕೊಂಡಿದೆ.
ನಿರ್ವಹಣೆ: ನಗರದ ಸುಮಾರು ಶೇ.30ರಷ್ಟು ಪ್ರದೇಶದ ತ್ಯಾಜ್ಯ ನಿರ್ವಹಣೆಗೆ ನಗರಸಭೆ ಯೋಜಿಸಿದ್ದು, ಈ ಘಟಕ ಸ್ಥಾಪನೆಗೆ ಗ್ರಾಮಸ್ಥರು ಸಮ್ಮತಿಸಿದ್ದಾರೆ. ಆದರೆ ನಿರ್ವಹಣೆ ಘಟಕದ ಪಕ್ಕದಲ್ಲಿಯೇ ನಗರಸಭೆಯ ಪ್ರಭಾವಿ ಸದಸ್ಯರೊಬ್ಬರು ನಿವೇಶನ ಅಭಿವೃದ್ಧಿಪಡಿಸಿದ್ದು, ತ್ಯಾಜ್ಯ ನಿರ್ವಹಣೆ ಘಟಕದ ಸ್ಥಾಪನೆಗೆ ಅವರು ವಿರೋಧಿಸುತ್ತಿದ್ದಾರೆಂದು ಆರೋಪಿಸಿದರು.
ಆಕ್ಷೇಪ: ನಗರಸಭೆ ಸದಸ್ಯರ ರಾಜಕೀಯ ಪ್ರಭಾವ ಮತ್ತು ವಿರೋಧದ ಹಿನ್ನೆಲೆಯಲ್ಲಿ ನಗರಸಭೆಯು ಹಾಗೊಂದು ವೇಳೆ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಗುರುತಿಸಿದ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಲ್ಲಿ ಗ್ರಾಮಸ್ಥರು ಅದಕ್ಕೆ ಆಕ್ಷೇಪಿಸಲಿದ್ದಾರೆ. ಅಷ್ಟೇ ಅಲ್ಲ ತ್ಯಾಜ್ಯ ನಿರ್ವಹಣೆಗೆ ಸ್ವಾಧೀನ ಪಡಿಸಿಕೊಂಡ 10ಎಕರೆ ಪ್ರದೇಶದಲ್ಲಿ ಹೊಸೂರು ಗ್ರಾಮದ ಬಡವರು ಮತ್ತು ನಿವೇಶನ ರಹಿತರು ಮನೆ ನಿರ್ಮಿಸಿಕೊಂಡು ವಾಸವಾಗಿರಲು ನಿರ್ಧರಿಸಿದ್ದಾರೆಂದು ಎಚ್ಚರಿಸಿದರು. ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಮೊದಲೇ ಜಾಗವನ್ನು ಗುರುತಿಸಿ ವಶಕ್ಕೆ ಪಡೆದಿರುವ ನಗರಸಭೆಯು ಈಚೆಗೆ ಉದ್ದೇಶಿತ ಘಟಕದ ಜಾಗೆಯ ಪಕ್ಕದಲ್ಲಿಯೇ ನಗರಸಭೆ ಸದಸ್ಯರೊಬ್ಬರು ನಿವೇಶನಗಳನ್ನು ನಿರ್ಮಿಸಿದ್ದು, ಅವರ ರಾಜಕೀಯ ಪ್ರಭಾವಕ್ಕೆ ಮಣಿದು ಘಟಕದ ನಿರ್ಮಾಣಕ್ಕೆ ಬೇರೆ ಜಾಗೆ ಗುರುತಿಸಲು ಮುಂದಾದಲ್ಲಿ ಅದಕ್ಕೆ ತೀವ್ರವಾಗಿ ವಿರೋಧಿಸಲಾಗುತ್ತದೆ ಎಂದು ಹೇಳಿದರು. ಹರಿಕೃಷ್ಣ, ಶಿವರಾಜ್, ತಾಯಣ್ಣ, ನಾಗೇಶ್ ಮತ್ತಿತರರಿದ್ದರು.