ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಗರ್‌ಹುಕುಂ ಸಕ್ರಮಕ್ಕೆ ಆಗ್ರಹಿಸಿ ಬಿಎಸ್ಪಿ ಧರಣಿ

Mainashree
Updated On : 30 Jan 2014, 11:38 am

ಕನ್ನಡಪ್ರಭ ವಾರ್ತೆ, ರಾಯಚೂರು, ಜ.30
ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿ ಕೊಡಿ ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಂವಿಧಾನದ ಅನುಚ್ಛೇದ 38, 39ರ ಅನ್ವಯ ದೇಶದ ಸಂಪತ್ತನ್ನು ಎಲ್ಲ ಜಾತಿ, ಜನಾಂಗದವರಿಗೆ ಸಮಾನವಾಗಿ ಹಂಚಿಕೆ ಮಾಡಬೇಕೆಂದಿದೆ. ಆದರೆ ಸದ್ಯ ಸಂಪತ್ತು ಕೇವಲ ಕೆಲವೇ ಕೆಲ ವ್ಯಕ್ತಿಗಳ ಕೈವಶವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಸಂವಿಧಾನದ ಆಶಯದಂತೆ ಭೂಮಿಯ ಸಮಾನ ಹಂಚಿಕೆಗೆ ಕಾನೂನು ಜಾರಿಗೆ ತಂದಿದ್ದರೂ ಅವುಗಳ ಅಸಮರ್ಪಕ ಅನುಷ್ಠಾನದಿಂದಾಗಿ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿರುವುದು ಖೇದಕರ ಸಂಗತಿಯಾಗಿದೆ. ರಾಜ್ಯದಲ್ಲಿ ಭೂರಹಿತರು ಕಳೆದ 20-25 ವರ್ಷಗಳಿಂದ ಹಳ್ಳ ದಿನ್ನೆಗಳನ್ನು ಸಮತಟ್ಟಾಗಿಸಿಕೊಂಡು ಕೃಷಿ ಕೈಗೊಂಡು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ  ಅವರು ಸಾಗುವಳಿ ಮಾಡುತ್ತಿರುವ ಜಮೀನು ಸಕ್ರಮಗೊಳಿಸುವ ಅವಶ್ಯಕ ಕಾರ್ಯ ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಕ್ರಮ ಕೈಗೊಂಡಿಲ್ಲ: ಅನೇಕ ಬಾರಿ ಬಗರ್ ಹುಕುಂ ಸಾಗುವಳಿಯ ಸಕ್ರಮಗೊಳಿಸುವಂತೆ ಒತ್ತಾಯಿಸಿದಾಗ ಸರ್ಕಾರ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಅದರಂತೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಕೆಲವೇ ಕೆಲ ಬಲಾಢ್ಯರು, ಪ್ರಭಾವಿಗಳ ಜಮೀನು ಮಾತ್ರ ಸಕ್ರಮಗೊಳಿಸುವ ಕಾರ್ಯ ಸರ್ಕಾರ ಮಾಡಿದೆ ಎಂದು ಟೀಕಿಸಿದರು.
ಹಣವಿಲ್ಲದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಬಗರ್‌ಹುಕುಂ ಸಾಗುವಳಿಗೆ ಕೋರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಸಕ್ರಮಗೊಳಿಸುವ ಕಾರ್ಯ ಸರ್ಕಾರ ಮಾಡಿಲ್ಲ. ಸುಮಾರು 2ಲಕ್ಷ ಜನ ಸಾಗುವಳಿದಾರರು ಹೀಗೆ ಸಕ್ರಮಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಮಾತ್ರ ಅವರ ಬಗ್ಗೆ ಕಾಳಜಿ ತೋರಿಲ್ಲ ಎಂದು ದೂರಿದರು.
ಅನೇಕ ಸರ್ಕಾರಗಳು ಬಂದು ಹೋದರೂ ಬಗರ್ ಹುಕುಂ ಸಾಗುವಳಿದಾರರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಹಾಗಾಗಿ ಬಡ ರೈತರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಕಾರಣ ಕೂಡಲೇ ಸರ್ಕಾರ ವಿ. ಬಾಲಸುಬ್ರಹ್ಮಣ್ಯಂ ಅವರ ಸಮಿತಿಯ ವರದಿ ಒಪ್ಪಿ ಕೊಳ್ಳಬೇಕು.ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದರು.
ಜಮೀನು ವಶ: ರಿಯಲ್ ಎಸ್ಟೇಟ್ ದಂಧೆಯಲ್ಲಿರುವವರು, ಭೂಮಾಲಿಕರು ಸೇರಿ ಸ್ಥಿತಿವಂತರು ಹೊಂದಿರುವ ಅಕ್ರಮ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಭೂರಹಿತ ಬಡಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಸರ್ಕಾರದ ಸೀಲಿಂಗ್ ಮಿತಿಗಿಂತ ಹೆಚ್ಚುವರಿ ಜಮೀನು ಹೊಂದಿರುವ ಭೂಮಾಲಿಕರಿಂದ ಜಮೀನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಕ್ರಿಯೆ ಚುರುಕು: 1991 ಮತ್ತು 1999ರ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಕೋರಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು. ಸರ್ಕಾರ ಕೂಡಲೇ ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿಯನ್ನು ನೇಮಿಸಿ ಪ್ರಕ್ರಿಯೆ ಚುರುಕುಗೊಳಿಸುವಂತೆ ಆಗ್ರಹಿಸಿದರು. ರಾಜ್ಯದ ಶೇ.80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿಯಿಲ್ಲ. ಅಂಥ ಗ್ರಾಮಗಳಲ್ಲಿ ಸ್ಮಶಾನ ಪ್ರದೇಶ ನಿಗದಿ ಮಾಡಿ ಒದಗಿಸುವಂತೆ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದರು.
ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಹನುಮಂತಪ್ಪ ವಕೀಲರು, ಹನುಮಂತ ಭಂಡಾರಿ, ಎಂಡಿ ಮುಮ್ತಾಜುದ್ದೀನ್, ಎ.ಜಯಣ್ಣ, ಕರೀಮುದ್ದೀನ್, ತಾಯಪ್ಪ, ನರಸಿಂಹಲು ವಕೀಲರು, ಎನ್. ಮೊಖಾಸಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement