ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳು

Mainashree
Updated On : 30 Jan 2014, 11:29 am

ಕ.ಪ್ರ. ವಾರ್ತೆ ಸಿಂಧನೂರು ಜ.30
ಸಿಂಧನೂರು ನಗರ ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಕೇಂದ್ರ. ಜೊತೆಗೆ ರಾಜ್ಯ ಸರ್ಕಾರಕ್ಕೆ ಹಲವು ವಿಧದ ತೆರಿಗೆ ಪಾವತಿಸಿ ಮುಂಚೂಣಿಯಲ್ಲಿದೆ. ಆದರೆ ಇಂತಹ ವಾಣಿಜ್ಯ ಪ್ರದೇಶದಲ್ಲಿಯೇ ಅನೇಕ ಸರ್ಕಾರಿ ಕಚೇರಿಗಳು ಇಂದಿಗೂ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ನಿಷ್ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.  ಸ್ವಂತ ಕಟ್ಟಡ ಹೊಂದಿರದ ಸರ್ಕಾರಿ ಇಲಾಖೆಗಳು ಸಾರ್ವಜನಿಕರ ಕೆಲಸಗಳನ್ನು ಮಾಡುತ್ತಿಲ್ಲವೆಂದೇನಲ್ಲ. ಆದರೆ ಆಡಳಿತ ನಿರ್ವಹಣೆಗೆ ಮತ್ತು ಜನರಿಗೆ ಅನುಕೂಲ ಕಲ್ಪಿಸುವಲ್ಲಿ ತೊಂದರೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಿನಿವಿಧಾನ ಸೌಧ ಕಟ್ಟಡ ತಹಸೀಲ್ದಾರ್ ಕಚೇರಿ ಹಿಂದೆಯೇ ಇದೆ. ತಹಸೀಲ್ದಾರ್ ಕಚೇರಿ ಅತ್ಯಂತ ಇಕ್ಕಟ್ಟಾದ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿ: ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವಾಗಿರುವ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ ಹಿರಿಯ ಉಪನೊಂದಣಾಧಿಕಾರಿಗಳ ಕಾರ್ಯಾಲಯ ಇಂದಿಗೂ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಸಸ್ನಿಲ್ದಾಣದಿಂದ ಅಂದಾಜು ಒಂದೂವರೆ ಕಿ.ಮೀ. ದೂರವಿರುವ ಈ ಕಾರ್ಯಾಲಯಕ್ಕೆ ಸಾರ್ವಜನಿಕರು ತಲುಪಲು ದಿನವೂ ಹೆಣಗಾಡುವುದು ಸಾಮಾನ್ಯ.
ಸಮಾಜ ಕಲ್ಯಾಣ ಇಲಾಖೆ ಕಚೇರಿ: ಮಹೆಬೂಬಿಯಾ ಕಾಲೋನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಾರ್ಯಾಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಖಾಸಗಿಯವರ ಕಟ್ಟಡ ಬಾಡಿಗೆಗೆ ಹಿಡಿಯಲಾಗಿದೆ. ಸ್ವಂತ ಕಟ್ಟಡವಿಲ್ಲದೆ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಎಷ್ಟರಮಟ್ಟಿಗೆ ಮುಂದುವರೆಸಿಕೊಂಡು ಹೋಗುತ್ತಿದೆ ಎನ್ನುವುದೇ ವಿಪರ್ಯಾಸದ ಸಂಗತಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಡಿ. ದೇವರಾಜು ಅರಸು ಸಂಶೋಧನಾ ಸಂಸ್ಥೆ,  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ, ಕೇಂದ್ರ ಪರಿಹಾರ ಸಮಿತಿ ವಿಭಾಗ ಹೀಗೆ ಬಹಳಷ್ಟು ಕೆಲಸದ ಹರವು ಹೊಂದಿರುವ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದೇ ಇರುವುದು ಸಾರ್ವಜನಿಕರಲ್ಲಿ ನಗೆಪಾಟಲಿನ ವಿಷಯವಾಗಿದೆ.
ಅಬಕಾರಿ ನಿರೀಕ್ಷಕರ ಕಚೇರಿ: ಅಬಕಾರಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ಅಧಿಕ ಆದಾಯ ಬರುತ್ತಿದೆ. ಆದರೆ ತಾಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆ ಮಾತ್ರ ಸ್ವಂತ ಕಟ್ಟಡ ಇಲ್ಲದೆ ಬಣಗುಟ್ಟುತ್ತಿದೆ. ಮನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೊರತೆ ಕಡಿಮೆಯಿಂದಾಗಿ ಇಲ್ಲಿಗೆ ಬರುವವರು ತಡಕಾಡಬೇಕಾಗಿದೆ.
ಸಿಡಿಪಿಓ ಕಚೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಾಡಿಗೆ ಕಟ್ಟಡವೇ ಗತಿಯಾಗಿದೆ. ಈ ಹಿಂದೆ ಪಿಡಬ್ಲ್ಯೂಡಿ ಕ್ಯಾಂಪ್ನ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಿಸಿಸುತ್ತಿತ್ತು. ಈಗ ಅದು ಯಲ್ಲಮ್ಮ ಗುಡಿ ಸಮೀಪದ ಖಾಸಗಿಯವರ ಕಟ್ಟಡವೊಂದಕ್ಕೆ ಜಂಪ್ ಆಗಿದೆ. ಈ ನೆಗೆತ ಆನೂಚಾನಾಗಿ ನಡೆಯುತ್ತಾ ಬಂದಿದೆ.
ಇದಲ್ಲದೆ ಭೂಸೇನಾ ನಿಗಮ(ಕೆಆರ್ಡಿಸಿಎಲ್) ವಳಬಳ್ಳಾರಿ ರಸ್ತೆಯ ಖಾಸಗಿ ಕಟ್ಟಡದಲ್ಲಿ, ಗಿಣಿಗೇರಾ-ಮಹಿಬೂಬುನಗರ ರೈಲ್ವೆ ಭೂಸ್ವಾಧೀನ ಕಚೇರಿ ಸುಕಾಲಪೇಟೆ ರಸ್ತೆಯ ಕಟ್ಟಡದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ತೂಕ ಮತ್ತು ಅಳತೆ ಕಚೇರಿಗಳು ಎಪಿಎಂಸಿ ಪ್ರಾಂಗಣದಲ್ಲಿ, ಕಾರ್ಮಿಕ ಇಲಾಖೆ ಖದರಿಯಾ ಕಾಲೋನಿಯ ಕಟ್ಟಡದಲ್ಲಿ, ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧನಾ ಕಚೇರಿ ಆದರ್ಶ ಕಾಲೋನಿಯಲ್ಲಿ, ಜೆಸ್ಕಾಂನ ನಗರ ಕಚೇರಿ ಕೋಟೆ ವೀರಣ್ಣ ದೇವಸ್ಥಾನದ ಪಕ್ಕದಲ್ಲಿ, ವಾಣಿಜ್ಯ ಮತ್ತು  ಆದಾಯ ತೆರಿಗೆ ಕಚೇರಿ ಟಿಎಪಿಸಿಎಂಎಸ್ ಕಟ್ಟಡದಲ್ಲಿ, ನೀರಾವರಿ ಇಲಾಖೆ ಜಾಗದಲ್ಲಿ ಮೀನುಗಾರಿಕೆ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ಅರ್ಧಕ್ಕಿಂತ ಹೆಚ್ಚು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇವುಗಳಲ್ಲದೆ ಅನೇಕ ವಸತಿ ನಿಲಯಗಳು ಖಾಸಗಿ ಕಟ್ಟಡ, ಶೆಡ್ಗಳಲ್ಲಿ ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ಶಾಸಕ ಹಂಪನಗೌಡ ಬಾದರ್ಲಿ ಕ್ರಮಕೈಗೊಳ್ಳುವರೇ?

ಪ್ರಹ್ಲಾದ ಗುಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement