ವಿಟಿಯು ಕುಲಪತಿ ವಿರುದ್ಧ ಹಕ್ಕುಚ್ಯುತಿ; ಸ್ವಾಗತ
ಕ.ಪ್ರ. ವಾರ್ತೆ ರಾಯಚೂರು ಜ.30
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಮಹೇಶಪ್ಪ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರ ಕಾರ್ಯವೈಖರಿಯನ್ನು ಜನಸಂಗ್ರಾಮ ಪರಿಷತ್ ಸ್ವಾಗತಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪರಿಷತ್ತಿನ ಮುಖಂಡ ಡಾ. ರಜಾಕ್ ಉಸ್ತಾದ್, ಹೈ.ಕ.ಕ್ಕೆ ಸಂವಿಧಾನದ 371 ನೇ ಕಲಂ(ಜೆ) ಜಾರಿಯಾದರೂ ಅದನ್ನು ಉಲ್ಲಂಘಿಸಿ ಹಲವಾರು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ಆತಂಕ ತಂದಿತ್ತು. ಆದರೆ ಗಣೇಶ್ ಕಾರ್ಣಿಕ್ ಅವರು ಹಾಗೆ ನೇಮಕಾತಿ ಮಾಡಿಕೊಂಡ ವಿಟಿಯು ಕುಲಪತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ರಚಿಸಿದ ಸರ್ಕಾರದ ಅಧಿಕಾರಿಗಳೇ ಅದನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿರುವುದು ಹಾಗೂ ಸರ್ಕಾರ 2013ರ ಫೆ.23ರಂದು ಹೊರಡಿಸಿದ ಆದೇಶವು ಎಲ್ಲ ನೇಮಕಾತಿಗಳನ್ನು ತಡೆದಿತ್ತು. ನವೆಂಬರ್ ತಿಂಗಳಿನಲ್ಲಿ ಮತ್ತೊಂದು ಆದೇಶ ಮಾಡಿ ಜ.1, 2013ರ ನಂತರ ಹೊರಡಿಸಿದ ಎಲ್ಲ ನೇಮಕಾತಿ ಅಧಿಸೂಚನೆ ವಾಪಸ್ ಪಡೆದು ಹೈ-ಕಕ್ಕೆ ಮೀಸಲಾತಿ ನಿಗದಿಗೊಳಿಸಬೇಕೆಂದು ಸೂಚಿಸಿತ್ತು. ಆದರೆ ಸರ್ಕಾರದ ಆದೇಶ ಮತ್ತು ಹೈ.ಕ. ಭಾಗಕ್ಕೆ ನಿಗದಿಯಾಗಿದ್ದ ಮೀಸಲಾತಿ ಉಲ್ಲಂಘಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ಮಹೇಶಪ್ಪ ತರಾತುರಿಯಲ್ಲಿ ನೇಮಕಾತಿ ಆದೇಶ ನೀಡಿದ್ದರು. ಆ ಬಗ್ಗೆ ಹೈ.ಕ. ಭಾಗದ ಜನಪ್ರತಿನಿಧಿಗಳೇ ಮೌನ ವಹಿಸಿದ್ದರು ಎಂದು ಆರೋಪಿಸಿದ್ದಾರೆ.
ಹೈ.ಕ.ದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರೂ ಸರ್ಕಾರ ಚಕಾರ ಎತ್ತಿರಲಿಲ್ಲ. ಈ ಸಂದರ್ಭ ವಿಧಾನ ಪರಷತ್ನಲ್ಲಿ ವಿಟಿಯು ಕುಲಪತಿ ಡಾ. ಮಹೇಶಪ್ಪ ಅವರ ವಿರುದ್ಧ ಮೀಸಲಾತಿ ನಿಯಮ ಉಲ್ಲಂಘನೆಯ ಹಿನ್ನೆಲೆ ಹಕ್ಕುಚ್ಯುತಿ ಮಂಡಿಸಿದ ಎಂಎಲ್ಸಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರು ಹೈ.ಕ.ಕ್ಕೆ ಮೋಸ ಮಾಡಿದ ಅಧಿಕಾರಿಯನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕೆಂದು ಒತ್ತಾಯಿಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವಕ್ತಪಡಿಸಿದ್ದಾರೆ.
ಹೈ.ಕ. ಭಾಗದ 6 ಜನ ಎಂಎಲ್ಸಿಗಳಿದ್ದರೂ ಬೇರೆ ಭಾಗದ ಸದಸ್ಯರೊಬ್ಬರು ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿದ್ದು ಶ್ಲಾಘನೀಯ. ಹೈ.ಕ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿ ಹೇಳಿದ್ದಾರೆ.