ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುದ್ದಿ ಸಂಕ್ಷೇಪ

Mainashree
Updated On : 30 Jan 2014, 11:39 am

ಇಸ್ಪೀಟ್; 10 ಜನರ ಬಂಧನ
ರಾಯಚೂರು: ಮಾನವಿ ತಾಲೂಕಿನ ಅಮರೇಶ್ವರ ಕ್ಯಾಂಪಿನ ತುಂಗಾಭದ್ರಾ ಎಡದಂಡೆ ಕಾಲುವೆ ಬಳಿ ಇಸ್ಪೀಟ್ ಆಡುತ್ತಿದ್ದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬುಜ್ಜಿ ರಾಮಬಾಬು ಮತ್ತಿತರೆ 9 ಜನರೆಂದು ಗುರುತಿಸಲಾಗಿದೆ. ಇವರು ಗ್ರಾಮದ ಬಳಿಯ ಎಡದಂಡೆ ಕಾಲುವೆಯ ಮೇಲೆ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಅವರನ್ನು ಬಂಧಿಸಿ ನಗದು 31,150 ಜಪ್ತಿ ಮಾಡಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೊಟ್ಟೆನೋವು; ಮಹಿಳೆ ಆತ್ಮಹತ್ಯೆ
ರಾಯಚೂರು: ತಾಲೂಕಿನ ಆತ್ಕೂರು ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಹನುಮಕ್ಕ ಎಂದು ಗುರುತಿಸಲಾಗಿದೆ. ಈಕೆಯು ಕಳೆದ ಅನೇಕ ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಅದರಿಂದ ಬೇಸತ್ತ ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಸೇವಿಸಿದ್ದು, ಅದರಿಂದ ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಿಸದೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.5ರಂದು ದಸಂಸ ಪ್ರತಿಭಟನೆ
ಲಿಂಗಸ್ಗೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ)ಯಿಂದ ಗುಲ್ಬರ್ಗ ವಿಭಾಗದ್ಯಂತ ಫೆ.5ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಂದು ದಸಂಸ ತಿಳಿಸಿದೆ. ದಲಿತ ದೇವೀಂದ್ರಪ್ಪ ದಳಪತಿ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಹಾಗೂ ಗುಲ್ಬರ್ಗ ವಿಭಾಗದ್ಯಂತ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಸಮಗ್ರ ತನಿಖೆಗೊಳಪಡಿಸಿ ಆರೋಪಿಗಳಿಗೆ ಶಿಕ್ಷೆಗೊಳಪಡಿಸಬೇಕು. ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರನ್ನು ಹೊಣೆ ಮಾಡಬೇಕು. ದಲಿತರ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ದೌರ್ಜನ್ಯಗಳ ತನಿಖೆಗೆ ಪ್ರತ್ಯೇಕ ವಿಶೇಷ ನ್ಯಾಯಾಲಯ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರಚಿಸಬೇಕೆಂಬ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.


ಆಪ್‌ನಂತೆ ನಾವೂ ಗೆದ್ದು ಬರ್ತೀವಿ!
ಆಮ್ ಆದ್ಮಿಗೂ, ಜಾತ್ಯತೀತ ಜನತಾದಳಕ್ಕೂ ಫರಕ್ ಎಲ್ಲೈತ್ರಿ ಅಂತ ಮಾತು ಶುರು ಮಾಡಿದ್ರು ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್. ನಮ್ದು ಪೀಪಲ್ಸ್ ಪಾರ್ಟಿ. ಆಮ್ ಆದ್ಮಿಗೆ ಹೋರಾಟವೇ ಸ್ಫೂರ್ತಿ. ಹಾಗೆನೇ ನಮ್ಮ ಪಕ್ಷವೂ ಹೋರಾಟ ಮಾಡಿಯೇ ಜನ್ಮ ತಾಳಿದ್ದು. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮದು ಅದೃಷ್ಟ ಖುಲಾಯಿಸಲಿದೆ ನೋಡ್ತಾ ಇರಿ ಎಂದು ದೊಡ್ಡ ದೊಡ್ಡ ಡೈಲಾಗ್ ಶುರು ಇಟ್ಟುಕೊಂಡ್ರು. ಜಿಲ್ಲೆಯಲ್ಲಿ ನಿಮ್ಮ ಪಕ್ಷ ಆಕ್ಸಿಜನ್ ಮೇಲೆನೇ ನಿಂತಿದೆ ಎಂದು ಪತ್ರಕರ್ತರು ಪ್ರಶ್ನೆ ಎಸೆದಾಗ ತಡವರಿಸಿದ ತಡಕಲ್, ಆಕ್ಸಿಜನ್ ಮ್ಯಾಗೆ ನಮ್ಮ ಪಕ್ಷ ಎಂದೂ ನಿಂತಿಲ್ಲ. ನಮ್ಮದೇನಿದ್ರೂ ಗಟ್ಟಿಮುಟ್ಟಾದ ಪಕ್ಷ. ಚುನಾವಣೆಯಲ್ಲಿ ಹಿನ್ನಡೆ ಆಗಿರ್ಬಹುದು. ಆಕ್ಸಿಜನ್ ಮ್ಯಾಲೆ ನಿಂತಿದೆ ಅಂತಾ ತಿಳಿಬ್ಯಾಡ್ರಿ. ಆಪ್ ಮಾದರಿಯಲ್ಲೇ ನಾವೂ ಮಿಂಚ್ತೇವೆ ನೋಡ್ರಿ ಎಂದ ತಡಕಲ್, 1918ರ ಅಸೆಂಬ್ಲಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯೋ ಮೂಲಕ ಕರ್ನಾಟಕದಲ್ಲೂ ಮ್ಯಾಜಿಕ್ ಮಾಡ್ತೇವೆ ಅಂದ್ರೂ!!! ಅಯ್ಯೋ ಆ ಟೈಮ್‌ನಲ್ಲಿ ಯಾವ ಅಸೆಂಬ್ಲಿ ಚುನಾವಣೆ ನಡೆಯಿತೋ ಎಂದು ಪತ್ರಕರ್ತರು ಒಬ್ಬರ ಮುಖ ಮತ್ತೊಬ್ಬರ ನೋಡಿಕೊಂಡು ಮುಗುಳ್ನಗುವ ಪರಿಸ್ಥಿತಿ ಉಂಟಾಗಿತ್ತು.
ಕೈಯಲ್ಲಿ ಲಿಂಬು ಯಾಕೆ?
ಜವಳಿ ಸಚಿವ ಬಾಬುರಾವ ಚಿಂಚನಸೂರ ಈಚೆಗೆ ಹಾವೇರಿಗೆ ಭೇಟಿ ನೀಡಿದಾಗ ಲಿಂಬು ಕೈಯಲ್ಲಿ ಹಿಡಿದುಕೊಂಡೇ ಸುದ್ದಿಗೋಷ್ಠಿ ನಡೆಸಿದರು. ಯಾವ ಪ್ರಶ್ನೆಗೂ ಸಮರ್ಪಕವಾಗಿ ಉತ್ತರಿಸದೆ ಕೊನೆಗೆ ಪ್ರಶ್ನೆ ಕೇಳುತ್ತಿದ್ದಂತೆ ಎದ್ದು ಹೊರಡಲು ಅನುವಾದರು. ಆಗ ಮಾಧ್ಯಮದವರು, 'ಕುಳಿತುಕೊಳ್ಳಿ ಸರ್, ಸಿಎಂ ಸಿದ್ದರಾಮಯ್ಯನವರು ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ' ಎಂದರು. ಅದೆಲ್ಲ ಸಿಎಂಗೆ ಬಿಟ್ಟದ್ದು ಎಂದಷ್ಟೇ ಹೇಳಿ ಸುಮ್ಮನಾದರು. ಆದರೆ, ಮಾಧ್ಯಮದವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. 'ಸರ್, ನಿಮ್ಮ ಸರ್ಕಾರ ಮೌಢ್ಯ ನಿಷೇಧಿಸಲು ಹೊರಟಿದೆ. ಆದರೆ ನೀವೇ ಕೈಯಲ್ಲಿ ಲಿಂಬು ಹಿಡಿದುಕೊಂಡು ಓಡಾಡಿದರೆ ಹೇಗೆ?' ಎಂದು ಪ್ರಶ್ನೆ ಎಸೆದರು. ಲಿಂಬುವನ್ನು ಮಾಟ ಮಾಡಲು ಬಳಸುತ್ತಾರಲ್ಲ. ನೀವೂ ಅಂಥಾದ್ದೇನಾದರೂ... ಎಂದು ಕೇಳಿದಾಗ ಸಚಿವರು ತಬ್ಬಿಬ್ಬಾದರು. ಸುದ್ದಿಗೋಷ್ಠಿಯುದ್ದಕ್ಕೂ ಕೈಯಲ್ಲಿ ಲಿಂಬು ಹಿಡಿದೇ ಮಾತನಾಡುತ್ತಿದ್ದ ಸಚಿವರಿಗೆ ತಮ್ಮ ಕೈಯಲ್ಲಿ ಲಿಂಬು ಇದೆ ಎನ್ನುವುದು ಆಗ ನೆನಪಾಯಿತು. ಯಾರೋ ಕೊಟ್ಟಿದ್ದನ್ನು ಎಸೆಯಲು ಆಗುವುದಿಲ್ಲವಲ್ಲ ಎಂಬ ಕಾರಣಕ್ಕೆ ಹಿಡಿದುಕೊಂಡಿದ್ದೆ ಅಷ್ಟೇ ಎಂದು ಹೇಳಿ ಲಿಂಬುವನ್ನು ಬೇರೆಯವರ ಕೈಗಿಟ್ಟರು. ಟವೆಲ್‌ನಿಂದ ಬೆವರು ಒರೆಸಿಕೊಳ್ಳುತ್ತ, ಲಿಂಬುಗೂ ಮೌಢ್ಯಕ್ಕೂ ಸಂಬಂಧವಿಲ್ಲ ಎಂದು ಸರಸರನೆ ಕಾರನ್ನೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement