ದಿಕ್ಕು ತಪ್ಪಿದ ಚರ್ಚೆಯಲ್ಲಿ ಸದಸ್ಯರ ಆರ್ಭಟ
ಕ.ಪ್ರ. ವಾರ್ತೆ , ರಾಯಚೂರು , ಜ.31
ನಗರ ಸ್ವಚ್ಛತೆ ವಿಚಾರದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರ ತೀವ್ರ ಅಸಮಾಧಾನ. ತರಕಾರಿ ಮಾರುಕಟ್ಟೆ ಬಾಡಿಗೆ ದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ. ಬಾಪನಯ್ಯದೊಡ್ಡಿ 30 ಗುಂಟೆ ಭೂಸ್ವಾಧೀನಕ್ಕೆ ಒಪ್ಪಿಗೆ. ದಿಕ್ಕು ತಪ್ಪಿದ ಚರ್ಚೆಯಲ್ಲಿ ಸದಸ್ಯರ ಆರ್ಭಟ. ಹಿರಿಯ ಸದಸ್ಯರಿಂದ ಸಮಾಧಾನದ ಬುದ್ಧಿಮಾತು.
ಇಲ್ಲಿನ ನಗರಸಭೆಯ ಸಾಮಾನ್ಯ ಮಹಾಸಭೆಯಲ್ಲಿ ಶುಕ್ರವಾರ ಕಂಡುಬಂದ ದೃಶ್ಯವಿದು.
ನಗರಸಭೆಯ ನೂತನ ಕಟ್ಟಡದಲ್ಲಿ ಅಧ್ಯಕ್ಷೆ ಮಹಾದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಮಹಾಸಭೆಯಲ್ಲಿ ಆರಂಭದಲ್ಲಿಯೇ ನಗರದ ಸ್ವಚ್ಛತೆಗೆ ಅಧಿಕಾರಿಗಳು ಶ್ರಮಿಸುತ್ತಿಲ್ಲ. ಪರಿಸರ ಎಂಜಿನಿಯರ್ ಸದಸ್ಯರ ದೂರಿಗೆ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಕೊರತೆ ನೆಪವೊಡ್ಡಲಾಗುತ್ತಿದೆ. ಪರಿಣಾಮ ನಗರದಲ್ಲೆಡೆ ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆ ಆಡಳಿತ ಸೋತಿದೆ ಎಂದು ಮಹೆಬೂಬ್ ಸೇರಿದಂತೆ ಅನೇಕ ಸದಸ್ಯರು ಸಭೆಗೆ ದೂರಿದರು.
ತಡವಾದ ಮಾಹಿತಿ: ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಬಸಪ್ಪ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಪರಿಸರ ಎಂಜಿನಿಯರ್ ನಿರ್ಲಕ್ಷ್ಯ ತೋರಿದ್ದಲ್ಲಿ ಕಠಿಣ ಕ್ರಮ ನಿಶ್ಚಿತ ಎಂದು ಸದಸ್ಯರ ಕೋಪ ತಣ್ಣಗಾಗಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯ ದೊಡ್ಡಮಲ್ಲೇಶಪ್ಪ, ತಮಗೆ ಸಭೆಯ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿದೆ. ಸಭೆಯಲ್ಲಿ ಚರ್ಚಿಸುವ ವಿಷಯಗಳ ಬಗ್ಗೆಯೂ ಮಾಹಿತಿಯಿಲ್ಲ. ಚರ್ಚಿಸುವ ವಿಷಯಗಳ ಬಗ್ಗೆ ಗೊತ್ತಿಲ್ಲದೇ ಸಭೆಗೆ ಹಾಜರಾದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದೇ ರೀತಿ ಸದಸ್ಯರು ಸಲ್ಲಿಸುವ ವಿಷಯಗಳನ್ನು ಸಭೆಯ ಅಜೆಂಡಾದಲ್ಲಿ ಸೇರ್ಪಡೆಗೊಳಿಸುವುದು ಸೂಕ್ತ. ಆದರೆ ಅಧ್ಯಕ್ಷರು ಈ ಬಗ್ಗೆ ಗಮನಹರಿಸಿದಂತೆ ಕಾಣುತ್ತಿಲ್ಲ. ಸಭೆಯಲ್ಲಿ ಚರ್ಚಿಸುವ ವಿಚಾರಗಳಿಗೆ ಸದಸ್ಯರ ಸಮ್ಮತಿ ಅವಶ್ಯಕ. ಸದಸ್ಯರ ಗಮನಕ್ಕೆ ತಾರದೇ ವಿಷಯಗಳನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ ಎಂದು ಸದಸ್ಯ ಯಲ್ಲಪ್ಪ ಆಕ್ಷೇಪಿಸಿದರು.
ನಿರ್ಮಾಣ ಆರಂಭವಾಗಿಲ್ಲ: ನಗರಸಭೆ ಸದಸ್ಯ ಈ.ವಿನಯ್ ಮಾತನಾಡಿ, ನಗರದ ಪ್ರಾಚೀನ ಕಿಲ್ಲೆಬೃಹನ್ಮಠಕ್ಕೆ ನಗರಸಭೆಯಿಂದ ಮಹಾದ್ವಾರ ನಿರ್ಮಾಣಕ್ಕೆ 2010ರಲ್ಲಿಯೇ ನಗರಸಭೆ ಒಪ್ಪಿಗೆ ಸೂಚಿಸಿದೆ. ಆದರೂ ಇದುವರೆಗೆ ನಿರ್ಮಾಣ ಮಾತ್ರ ಆರಂಭಗೊಂಡಿಲ್ಲ ಎಂದು ದೂರಿದರು.
ಪೌರಾಯುಕ್ತರು ಪ್ರತಿಕ್ರಿಯಿಸಿ ಅನುದಾನದ ಕೊರತೆಯ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಸಮಜಾಯಿಷಿ ನೀಡಿದರು. ನಗರಸಭೆಗೆ ಕಳೆದ ಮೂರು ತಿಂಗಳಿನಲ್ಲಿ ಸಂಗ್ರಹಿಸಿದ ಆದಾಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸದಸ್ಯ ಮಹೆಬೂಬ್ ನಗರಸಭೆಯ ಆಸ್ತಿಯಿಂದ ಸಂಗ್ರಹವಾಗುವ ಆದಾಯದ ಪಟ್ಟಿ ಯಲ್ಲಿ ತರಕಾರಿ ಮಾರುಕಟ್ಟೆಯ ಬಾಡಿಗೆ ಸೇರಿ ಇನ್ನಿತರೆ ವಿಚಾರಗಳು ಸೇರಿಲ್ಲ. ಅಧಿಕಾರಿಗಳು ಸದಸ್ಯರು ಹಾಗೂ ಜನತೆಯನ್ನು ವಂಚಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಮತ್ತೊಬ್ಬ ನಗರಸಭೆ ಸದಸ್ಯ ಈಶಪ್ಪ ಮಾತನಾಡಿ, ನಗರಸಭೆಗೆ ಮಂಜೂರಾಗುವ ವಿವಿಧ ಯೋಜನೆಗಳ ಜಾರಿಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ನಗರಕ್ಕೆ ಕಳೆದ ಬಾರಿ ಮಂಜೂರಾದ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಅನಗತ್ಯ ದಾಖಲೆಗಳನ್ನು ಬೇಡಿಕೆಯಿರಿಸಿದ್ದರಿಂದ ಜನತೆ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಲ್ಲ. ಅಕ್ರಮ ಸಕ್ರಮ ಯೋಜನೆಯಡಿ ಬಡವರಿಗೆ ನಿವೇಶನದ ದಾಖಲೆ ಒದಗಿಸಲು ನಗರಸಭೆ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಮಹಾಲಿಂಗ ಸಭೆಯಲ್ಲಿ ಮಾತನಾಡಿ, ರಾಂಪೂರ ಪ್ರದೇಶದಲ್ಲಿ ಅನಾರೋಗ್ಯಕರ ಪರಿಸ್ಥಿತಿಯಿದೆ. ಸ್ವಚ್ಛತೆಯ ಕೊರತೆಯಿಂದ ಅನೇಕರು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಗರಸಭೆ ಪರಿಸರ ಎಂಜಿನಿಯರ್ ನಿರ್ಲಕ್ಷ್ಯ ಹೆಚ್ಚಿದೆ. ವಾರ್ಡಿನ ಸಮಸ್ಯೆ ಬಗ್ಗೆ ದೂರಿದರೂ ಅವರು ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸುತ್ತಿಲ್ಲ ಎಂದು ಆರೋಪಿಸಿದರು.
ಆದಾಯ: ಹಾಗೆಯೇ ಕಳೆದ 10ವರ್ಷದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಕಸಸಂಗ್ರಹಣೆಯಿಂದ ಲಭ್ಯವಾದ ಆದಾಯದ ಕುರಿತು ಮಾಹಿತಿ ಹಕ್ಕು ಅಡಿ ಕೇಳಿದಾಗ ನಗರಸಭೆಯು ರು. 10.59ಲಕ್ಷ ಸಂಗ್ರಹವಾಗಿದೆ ಎಂದು ಗೊತ್ತಾಗಿದೆ. ಆದರೆ ಮಹಾಸಭೆಯ ನಡೆವಳಿಕೆಯಲ್ಲಿ ನೀಡಿದ ಮಾಹಿತಿಯಂತೆ ಪ್ರತಿ ತಿಂಗಳು ಸಂಗ್ರಹವಾಗುವ ಮೊತ್ತ ಪರಿಶೀಲಿಸಿದರೆ ಭಾರೀ ಪ್ರಮಾಣದ ಹಣ ಸಂಗ್ರಹವಾಗುತ್ತಿದೆ. ಹಣ ಯಾರ ಜೇಬು ಸೇರುತ್ತಿದೆ ಎಂದು ಆಕ್ಷೇಪಿಸಿದರು.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮಾಹಿತಿ ನೀಡಲಾಗುತ್ತದೆ ಎಂದು ಪೌರಾಯುಕ್ತ ಬಸಪ್ಪ ಭರವಸೆ ನೀಡಿದರು.
ನಂತರ ನಡೆದ ಚರ್ಚೆಯಲ್ಲಿ ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಮಳಿಗೆಗಳ ಬಾಡಿಗೆ ಹೆಚ್ಚಳಕ್ಕೆ ಸಂಬಂಧಿಸಿ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಹೊಸ ಮಾರುಕಟ್ಟೆಯ ನಿರ್ಮಾಣವಾಗುವವರೆಗೆ ಹಾಲಿ ದರದಲ್ಲಿಯೇ ಬಾಡಿಗೆ ಸ್ವೀಕರಿಸಲು ಮನವಿ ಮಾಡಿದರು. ಹಾಗೆಯೇ ಸದ್ಯದ ಮಾರುಕಟ್ಟೆಯಲ್ಲಿ ಸೂಕ್ತ ಸೌಲಭ್ಯಗಳನ್ನು ದೊರಕಿಸುವಂತೆ ಕೇಳಿದರು.
ಜಾಗ ಸ್ವಾಧೀನ: ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಬಸಪ್ಪ, ಈಗಾಗಲೇ ವರ್ತಕರೇ ಹೆಚ್ಚಿನ ಬಾಡಿಗೆ ನೀಡಲು ದರ ಪಟ್ಟಿ ಸಲ್ಲಿಸಿ ಮನವಿ ಮಾಡಿದ್ದು, ಅದರಂತೆಯೇ ಬಾಡಿಗೆ ವಸೂಲು ಮಾಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ನಗರದ ಹರಿಜನವಾಡ ಪ್ರದೇಶದ ನಿವಾಸಿಗಳಿಗೆ ಶೌಚಾಲಯ ನಿರ್ಮಾಣಕ್ಕೆ ಈ ಹಿಂದೆ 1.30ಎಕರೆ ಪ್ರದೇಶ ಸ್ವಾಧೀನಕ್ಕೆ ಕೇಳಲಾಗಿತ್ತು. ಆದರೆ ಸದ್ಯ ಅಷ್ಟೊಂದು ಜಮೀನಿನ ಅವಶ್ಯಕತೆಯಿಲ್ಲ. ಈ ಹಿನ್ನೆಲೆಯಲ್ಲಿ ಶೌಚಾಲಯ ಅನಗತ್ಯ ನಿರ್ಮಾಣವಾಗದಂತೆ ನೋಡಿಕೊಳ್ಳಲು 30ಗುಂಟೆ ಪ್ರದೇಶದ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ಒಪ್ಪಿಗೆ ಸೂಚಿಸಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ನೂತನ ಸದಸ್ಯರು ಆಕ್ರೋಶಭರಿತರಾಗಿ ಪೌರಾಯುಕ್ತರ ಮೇಲೆ ರೇಗಿದ ಪ್ರಸಂಗ ನಡೆದು ಹಿರಿಯ ಸದಸ್ಯ ಜಯಣ್ಣ ನೂತನ ಸದಸ್ಯರಿಗೆ ಬುದ್ಧಿಮಾತು ಹೇಳಿದ ಪ್ರಸಂಗ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳಿದ್ದರು.
ಸೈಡ್ ಲೈಟ್ಸ್...
* ದಿಕ್ಕು ತಪ್ಪಿದ ಚರ್ಚೆ ಸರಿದಾರಿಗೆ ಬರಲಿಲ್ಲ
* ಶರವೇಗದಲ್ಲಿ ಅಜೆಂಡಾ ಓದಿದ ನಗರಸಭೆ ಸಿಬ್ಬಂದಿ
* ಸಭೆಯ ಆರಂಭದಲ್ಲಿ ಸದಸ್ಯರ ವಾಗ್ವಾದ, ಕೊನೆಗೆ ಎಲ್ಲವೂ ಪಾಸ್.. ಪಾಸ್...
* ನೀರಿನ ನಿರ್ವಹಣೆ ಸಮಿತಿಗೆ ಜಯಣ್ಣ ಅಧ್ಯಕ್ಷ
* ಸ್ಥಾಯಿ ಸಮಿತಿಗೆ ಸದಸ್ಯರ ನೇಮಕ