ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೇವೆ ಕಾಯಂಗೆ ಹಾಸ್ಟೆಲ್ ನೌಕರರ ಪ್ರತಿಭಟನೆ

Vishwanath S
Updated On : 1 Feb 2014, 11:18 am

ರಾಯಚೂರು: ಸರ್ಕಾರದ ಹಾಸ್ಟೆಲ್ ಹಾಗೂ ವಸತಿ ನಿಲಯಗಳಲ್ಲಿ ಕಳೆದ ಐದು ವರ್ಷಗಳಿಂದ ಸತತ ದುಡಿಯುತ್ತಿರುವ ದಿನಗೂಲಿ ನೌಕರರ  ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ಹಾಸ್ಟಲ್ ಹಾಗೂ ವಸತಿ ನಿಲಯದ ನೌಕರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸ್ಲಲ್ಲಿಸಿ, ದಿನಗೂಲಿ ಆಧಾರದಲ್ಲಿ ಸರ್ಕಾರದ ವಿವಿಧ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಕನಿಷ್ಠ ವೇತನ ಪರಿಷ್ಕರಿಸಿ: ಹೊರಗುತ್ತಿಗೆ ಮೂಲಕ ಸೇವೆ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು. ಹಾಸ್ಟೆಲ್ ಮತ್ತು ವಸತಿ ನಿಲಯಗಳ ನೌಕರರಿಗೆ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಸೇರಿ ಕನಿಷ್ಠ 10 ಸಾವಿರ ಸಂಬಳ ನಿಗದಿಯಾಗುವಂತೆ 2009ರ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ವೇತನ ಪರಿಷ್ಕರಣೆಯಾಗುವವರೆಗೆ ಎಲ್ಲ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಕಾಯಂ ಹಾಗೂ ಗುತ್ತಿಗೆ ನೌಕರರಿಗೆ 2009ರ ಗೆಜೆಟ್‌ನಂತೆ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಸಹಿತ ಸಂಬಳ ನೀಡಬೇಕು. ಹಾಸ್ಟೆಲ್ ನೌಕರರಿಗೆ ಕಾಯಂ ಹಾಗೂ ಗುತ್ತಿಗೆ ಎಂಬ ಭೇದವಿಲ್ಲದೆ ಪ್ರತಿ ತಿಂಗಳು 10ನೇ ತಾರೀಕಿನೊಳಗೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡುವಂತೆ ಒತ್ತಾಯಿಸಿದರು.
ತಾರತಮ್ಯ ಪರಿಹರಿಸಿ: ಕಾರ್ಮಿಕ, ನೌಕರರಿಗೆ ಅನ್ವಯವಾಗುವ ಎಲ್ಲ ಕಾನೂನು ಮತ್ತು ಸೌಲಭ್ಯಗಳನ್ನು ಹಾಸ್ಟೆಲ್ ದಿನಗೂಲಿ ನೌಕರರಿಗೆ ವಿಸ್ತರಿಸಬೇಕು. ಹಾಸ್ಟೆಲ್ ನೌಕರರ ವೇತನದಲ್ಲಿ ಕಡಿತಗೊಳಿಸಲಾಗದ ಇಎಸ್‌ಐ ಮತ್ತು ಪಿಎಫ್ ಹಣ ಜಮಾ ಮಾಡಿದ ಬಗ್ಗೆ ದಾಖಲೆ ದಿನಗೂಲಿ ನೌಕರರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ಅಕ್ರಮದ ಭ್ರಷ್ಟಾಚಾರ ತಡೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಎಲ್ಲ ಹಾಸ್ಟೆಲ್‌ಗಳಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಊಟ ಉಪಹಾರವನ್ನು ಸರಿಯಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
2013ರ ಪರಿಷ್ಕೃತ ವೇತನ ಜಾರಿಗೆ ತನ್ನಿ: ವಸತಿ ನಿಲಯಗಳಿಗೆ 100 ಜನ ವಿದ್ಯಾರ್ಥಿಗಳಿಗೆ 8 ಜನರಂತೆ ಸಿಬ್ಬಂದಿ ಒದಗಿಸಬೇಕು. 2013ರಲ್ಲಿ ಪರಿಷ್ಕರಣೆಗೊಂಡ ವೇತನವನ್ನು ಎಲ್ಲ ಕಾರ್ಮಿಕರಿಗೆ ಜಾರಿಗೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ರಂಗನಾಥ ಕಲ್ಮಲಾ, ಶಿವರಾಜ್ ಅಲಕೋಡ್, ಗುರುರಾಜ ಗಣೇಕಲ್, ಗೌರಮ್ಮ, ಹನುಮಂತ ಮುದಗಲ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement