ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರ್ಟಿಐ, ಆರ್ಟಿಇ ಕಾರ್ಯಕರ್ತರ ವೇದಿಕೆ ಅಸ್ತಿತ್ವಕ್ಕೆ

Vishwanath S
Updated On : 2 Jul 2014, 10:53 am

ರಾಯಚೂರು: ಮಾಹಿತಿ ಹಕ್ಕು ಕಾಯಿದೆ ಹಾಗೂ ಕಡ್ಡಾಯ ಶಿಕ್ಷಣ ಕಾಯಿದೆ ಅಡಿ ಪ್ರಾಮಾಣಿಕವಾಗಿ ಹೋರಾಡುತ್ತಿರುವವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ ಆರ್‌ಟಿಐ ಮತ್ತು ಆರ್‌ಟಿಇ ಕಾರ್ಯಕರ್ತರ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಸಿರಿ ಆನಂದಕುಮಾರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಮನೆ ಮಾಡಿದ ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ಹೋರಾಡುತ್ತಿರುವ ಆರ್‌ಟಿಐ, ಆರ್‌ಟಿಇ ಕಾರ್ಯಕರ್ತರು ಅನೇಕ ಸಂದರ್ಭದಲ್ಲಿ ಹಲ್ಲೆಗೊಳಗಾಗಿ, ಪ್ರಾಣಾಪಾಯಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವವೇ ಬುಡಮೇಲು: ಸಮರ್ಪಕ ಮಾಹಿತಿ ನೀಡದೇ ಹಲವು ಅಧಿಕಾರಿಗಳು ಕಾರ್ಯಕರ್ತರನ್ನು ಬೆದರಿಸಿ ಇಲ್ಲವೇ ಆಮಿಷಕ್ಕೆ ಒಳಗಾಗುವಂತೆ ಹುನ್ನಾರ ನಡೆಸಿ ಬಗ್ಗು ಬಡಿಯುತ್ತಿರುವುದು ಪತ್ತೆಯಾಗಿದೆ. ಭ್ರಷ್ಟ ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕಾರ್ಯ ಮಾಡುತ್ತಿದ್ದು, ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಾರ್ಯಕರ್ತರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಆಗ್ರಹ: ವೇದಿಕೆಯ ರಾಜ್ಯದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ತರಲಾಗಿದ್ದು, ಆರ್‌ಟಿಐ ಮತ್ತು ಆರ್‌ಟಿಇ ಮಾಹಿತಿಗಳನ್ನು ಹೊರತೆಗೆದು ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕಾನೂನು ಸಮರ ಸಾರುವ ಕಾರ್ಯಕರ್ತರ ರಕ್ಷಣೆ ಹಾಗೂ ಅವರಿಗೆ ಸರ್ಕಾರದಿಂದ ಸವಲತ್ತು ದೊರಕಿಸಲು ವೇದಿಕೆ ನೆರವಾಗಲಿದೆ ಎಂದು ಹೇಳಿದರು. ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಸಂಗಾಪುರ, ಲೋಕೇಶ್ ಹಳ್ಳಿಗೇರಿ, ವೈಜನಾಥ, ರಾಮಣ್ಣ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement