ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲೋಕಾಯುಕ್ತ ತನಿಖೆ: ಗಣಿಕುಳಗಳಲ್ಲಿ ತಳಮಳ

Vishwanath S
Updated On : 2 Jul 2014, 10:53 am

ಮುದಗಲ್: ಪಟ್ಟಣ ಸೇರಿದಂತೆ ಮಾಕಾಪುರ, ಆದಾಪುರ, ವ್ಯಾಸನಂದಿಹಾಳ ಸಿರವಾರದಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ಲೋಕಾಯುಕ್ತರ ತಂಡ ಸೋಮವಾರ ಬೆಳಗಿನಿಂದ ಸಂಜೆವರೆಗೆ ತನಿಖೆ ನಡೆಸಿದ್ದರಿಂದ ಗಣಿ ಮಾಲೀಕರಲ್ಲಿ ತಳಮಳ ಆರಂಭಗೊಂಡಿದೆ.
ಲೋಕಾಯುಕ್ತ ಡಿವೈಎಸ್‌ಪಿ ಸಿ.ಎಸ್. ಪಾಟೀಲ್ ಹಾಗೂ ಇಬ್ಬರು ಸರ್ಕಲ್ ಇನ್ಸ್‌ಪೆಕ್ಟರ್ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ವರದಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಣಿಗಾರಿಕೆ ಪ್ರದೇಶದಲ್ಲಿ ತನಿಖೆ ನಡೆಸಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಮುದಗಲ್ ಮತ್ತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ರಮ ಗಣಿ ತನಿಖೆ ತಂಡದ ಮುಖ್ಯಸ್ಥ ಸಹಾಯಕ ಆಯುಕ್ತ ಟಿ. ಯೋಗೇಶ ಸೂಚನೆ ಮೇರೆಗೆ 27 ಜನರ ಮೇಲೆ 8 ಪ್ರಕರಣಗಳು ಸ್ಥಳೀಯ ಕಂದಾಯ ನಿರೀಕ್ಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಲೋಕಾಯುಕ್ತರು ಗಣಿ ಪ್ರದೇಶಗಳ ಸರ್ವೆ ನಂ ಮತ್ತು ಭೂ ಪ್ರದೇಶವನ್ನು ಪರಿಶೀಲಿಸಿದ್ದರಿಂದ ಗಣಿ ಮಾಲೀಕರು ಗಣಿ ಪ್ರದೇಶದಿಂದ ದೂರ ಉಳಿದಿದ್ದರು. ಯಾವ ಸಮಯದಲ್ಲಿ ಏನಾಗುತ್ತದೆ, ಯಾರ ಮನೆ ಮೇಲೆ ದಾಳಿ ನಡೆಯುತ್ತದೆಯೋ ಎನ್ನುವ ಭೀತಿಯಲ್ಲಿದ್ದಾರೆ.
ಹಿನ್ನೆಲೆ: ಅಕ್ರಮ ಗಣಿಗಾರಿಕೆ ಬಗ್ಗೆ ತಾಲೂಕಿನ ವಿವಿಧ ಸಂಘಟನೆಗಳು ಮಾಡಿದ ಆರೋಪ ಮತ್ತು ಪ್ರತಿಭಟನೆ ಹಕ್ಕೊತ್ತಾಯಕ್ಕೆ ಮಣಿದ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ನಿರ್ದೇಶನದಂತೆ ಕಂದಾಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಸರ್ವೆ ಇಲಾಖೆ, ಜಂಟಿ ತಂಡ ಸರ್ವೆ ನಡೆಸಿ ಪಟ್ಟಾ ಜಮೀನು ಬದಲಿಗೆ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ನಡೆಸಿದ್ದು ಅಲ್ಲದೆ, ರಾಜ್ಯಧನ ವಂಚನೆ, ತ್ಯಾಜ್ಯ ವಸ್ತು ವಿಲೇವಾರಿಯಲ್ಲಿ ಲೋಪದೋಷ ಮುಂತಾದ ಅಕ್ರಮ ಗಣಿಗಾರಿಕೆ ವಿಷಯಗಳ ಬಗ್ಗೆ ಸಮಗ್ರ ವರದಿ ಆಧರಿಸಿ ಸಂಬಂಧಿಸಿದ ಅಕ್ರಮಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಆಯಾ ಠಾಣೆಗೆ ವರದಿ ನೀಡಿದ್ದರಿಂದ ಪ್ರಕರಣ ದಾಖಲಿಸಲಾಗಿದೆ.
ತನಿಖೆಯಿಂದ ಬಹಿರಂಗ: ಮುದಗಲ್, ಮಾಕಾಪುರ, ಆದಾಪುರ ಗ್ರಾಮಗಳಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆ ಬಳ್ಳಾರಿ ಗಣಿಗಾರಿಕೆ ಮೀರಿಸುವಂತೆ ಅಕ್ರಮ ನಡೆಯುತ್ತಿದೆ ಎಂದು ಪ್ರಗತಿಪರ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದವು. ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಗಳು ಗಣಿಗಾರಿಕೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿ ನಾಗರಾಜು ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ ಅವರನ್ನು ತನಿಖಾ ತಂಡದ ಅಧಿಕಾರಿಯನ್ನಾಗಿ ನೇಮಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು. ಸತತ ಒಂದು ತಿಂಗಳ ಪರ್ಯಂತ ತನಿಖೆ ನಡೆಸಿದ ಸಹಾಯಕ ಆಯುಕ್ತರು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ನಡೆಸಿದ, ರಾಜ್ಯಧನ ವಂಚನೆ, ಘನತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ ಮಾಡಿದ 27 ಜನರ ವಿರುದ್ಧ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿದ್ದರಿಂದ ಲೋಕಾಯುಕ್ತರು ವರದಿಯನ್ನಾಧರಿಸಿ ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement