'ಎಸ್ಸಿ, ಎಸ್ಟಿ ಅನುದಾನ ದುರುಪಯೋಗ'
ಸಿಂಧನೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಓಣಿಗಳಲ್ಲಿ ರಸ್ತೆ, ಚರಂಡಿ ಮತ್ತು ನೈರ್ಮಲೀಕರಣ ಕಾಮಗಾರಿಗಳಿಗೆ ಮೀಸಲಿರುವ ಅನುದಾನವನ್ನು ಶಾಸಕ ಹಂಪನಗೌಡರು ಇತರೇ ವರ್ಗದವರಿಗೆ ಬಳಕೆ ಮಾಡಿ ಎಸ್‌ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಂಡರೆ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಅವರ ಪಕ್ಷದ ಶಾಸಕರೇ ಈಗ ಬೇರೆ ಉದ್ದೇಶಕ್ಕೆ ಹಣ ಬಳಸಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ನಾಡಗೌಡ ಟೀಕಿಸಿದರು.
ಬಾದರ್ಲಿಯಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ 1.30 ಕೋಟಿ ವೆಚ್ಚದ ಕಾಮಗಾರಿಯನ್ನು ಗ್ರಾಮದ ಎಲ್ಲ ಓಣಿಗಳಲ್ಲಿ ಕಾಮಗಾರಿ ನಡೆಸಲು ಅಂದಾಜು ಪತ್ರಿಕೆ ತಯಾರಿಸಿ ಭೂಸೇನಾ ನಿಗಮಕ್ಕೆ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ಇಂಥ ನಿಯಮ ಬಾಹಿರ ಕಾಮಗಾರಿ ಶಂಕುಸ್ಥಾಪನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡರನ್ನು ಜು.5ರಂದು ಆಹ್ವಾನಿಸಿರುವುದು ಹಾಸ್ಯಸ್ಪದ ಎಂದರು. ಅಧ್ಯಕ್ಷ ಎಂ.ಲಿಂಗಪ್ಪ, ಧರ್ಮನಗೌಡ ಮಲ್ಕಾಪುರ, ಕೋಟೇಶ್ವರರಾವ್, ಕೆ. ಜಿಲಾನಿ ಪಾಷ ಇದ್ದರು.