ಜಿಲ್ಲಾಡಳಿತ ಇನ್ನಾದ್ರೂ ಮೌನ ಮುರಿಯಲಿ
ವಿಶೇಷ ವರದಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 3
ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅನುದಾನ, ಸಿಬ್ಬಂದಿ ಕೊರತೆ. ಅಧಿಕಾರದಾಸೆಗೆ ರಾಜಕೀಯ ಕಿತ್ತಾಟ. ಹಲ್ಲಿಲ್ಲದ ಹಾವಿನಂತಾದ ಜಿಲ್ಲಾಡಳಿತ. ಸದಸ್ಯರಿಗೆ ಸ್ವಚ್ಛ ಪರಿಸರ ಹೊಂದಬೇಕೆಂಬ ಬಯಕೆಯ ಅಭಾವದಿಂದ ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳಲ್ಲಿ ಎಂದಿನಿಂದಲೂ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.
ಜಿಲ್ಲಾ ಕೇಂದ್ರ ರಾಯಚೂರು ಸೇರಿ ತಾಲೂಕು ಕೇಂದ್ರಗಳು ಹಾಗೂ ವಾಣಿಜ್ಯಿಕವಾಗಿ ಪ್ರಗತಿ ಹೊಂದುತ್ತಿರುವ ಪ್ರಮುಖ ಪಟ್ಟಣಗಳಲ್ಲಿ ತ್ಯಾಜ್ಯ ಮತ್ತು ಕಸದ ವಿಲೇವಾರಿ ದಿನಗಳೆದಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಪ್ರಶ್ನಿಸಿ ಕ್ರಮ ಕೈಗೊಳ್ಳುವ ಧೈರ್ಯ ತೋರದಿರುವುದೂ ಕಾರಣ.
ಇನ್ನೊಂದೆಡೆ ಸರ್ಕಾರದಿಂದ ಸೂಕ್ತ ಸಂದರ್ಭದಲ್ಲಿ ದೊರೆಯದ ಅನುದಾನ, ಪೌರ ಕಾರ್ಮಿಕರ ಕೊರತೆ. ಸಿಬ್ಬಂದಿ ನೇಮಕಾತಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಆದಾಯದ ಕೊರತೆ. ಹತ್ತು ಹಲವು ಅಭಾವಗಳಿಂದಾಗಿ ಕಸದ ವಿಲೇವಾರಿ ಯಾವಾಗಲೂ ಕಗ್ಗಂಟು.
ಆಗಾಗ್ಗೆ ನಗರಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಉಂಟಾಗುವ ರಾಜಕೀಯ ಕಿತ್ತಾಟದ ಸನ್ನಿವೇಶಗಳು ಜನರ ಬದುಕನ್ನು ಮತ್ತಷ್ಟು ಕಲುಷಿತ ಪರಿಸರಕ್ಕೆ ನೂಕುತ್ತವೆ. ಲಭ್ಯ ಸಿಬ್ಬಂದಿ ಅಂಥ ಸಂದರ್ಭದಲ್ಲಿ ರಾಜಕೀಯ ದೊಂಬರಾಟ ವೀಕ್ಷಕರಾಗುತ್ತಾರೆ. ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿನ ತ್ಯಾಜ್ಯ ಮತ್ತು ಕಸದ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು 'ಕನ್ನಡಪ್ರಭ' ಮಾಡಿದೆ. ಪ್ರಭಾರಿ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಅವರು ಸಮಸ್ಯೆ ನಿವಾರಣೆಯ ಭರವಸೆ ನೀಡಿದ್ದಾರೆ. ಕಸದ ವಿಲೇವಾರಿಗೆ ಇನ್ನಾದರೂ ನಗರಾಡಳಿತಗಳು ಮುಂದಾಗಬೇಕಿದೆ ಎಂಬುದು ಜನರ ಆಶಯ.