ಯೋಜನೆ ಅನುಷ್ಠಾನ ಖಾಸಗಿಗೆ ವಹಿಸಬೇಡಿ
ರಾಯಚೂರು: ದೇವದಾಸಿ ಪುನರ್ವಸತಿ ಯೋಜನೆಯ ಅನುಷ್ಠಾನದ ಹೊಣೆಯನ್ನು ಖಾಸಗಿಯವರಿಗೆ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡದಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ದೇವದಾಸಿ ಪುನರ್ವಸತಿ ಯೋಜನಾ ಸ್ವಯಂ ಸೇವಕರ ಸಂಘ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತರು, ಯೋಜನೆಯ ಹೊಣೆಯನ್ನು ಖಾಸಗಿಯವರಿಗೆ, ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡದೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಿಬ್ಬಂದಿ ಮತ್ತು ಕಚೇರಿ ಯಿಂದ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಸ್ವಯಂ ಸೇವಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಕನಿಷ್ಠ ವೇತನ ನಿಗದಿ ಮಾಡಿ ವಿತರಿಸುವ ಸೇವಕರಿಗೆ 4 ಸಾವಿರ ವೇತನ ನೀಡಬೇಕು. ಪುನರ್ವಸತಿ ಯೋಜನೆ ಕಚೇರಿಗೆ ಕೆಲಸದ ನಿಮಿತ್ತ ತೆರಳಿದಾಗ ಸಿಬ್ಬಂದಿಯಂತೆ ಕಾಣುವ ಪರಿಪಾಠ ಬೆಳೆಸಲು ಆಗ್ರಹಿಸಿದರು.
ಬಡ್ಡಿ ರಹಿತ ಸಾಲ ನೀಡಿ: ಎಲ್ಲ ಸ್ವಯಂ ಸೇವಕರಿಗೆ ಉಚಿತ ನಿವೇಶನ ಸಹಿತ ಮನೆ ನಿರ್ಮಿಸಿಕೊಡಬೇಕು. ಅಂತ್ಯೋದಯ ಕಾರ್ಡುಗಳನ್ನು ನೀಡಬೇಕು. ಸ್ವಯಂ ಉದ್ಯೋಗಕ್ಕಾಗಿ ಶೇ.75ರ ಸಹಾಯಧನದಲ್ಲಿ ಆರ್ಥಿಕ ನೆರವು ನೀಡಬೇಕು. ಬಡ್ಡಿ ರಹಿತ 1 ಲಕ್ಷದವರೆಗೆ ಸಾಲ ಒದಗಿಸುವಂತೆ ಒತ್ತಾಯಿಸಿದರು.
ಸ್ವಸಹಾಯ ಸಂಘಗಳ ನಡುವೆ ಮತ್ತು ದಲಿತ ಮಹಿಳೆಯರಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಮತ್ತಿತರೆ ಕೆಲಸ ಕಾರ್ಯಗಳನ್ನು ವಹಿಸಿಕೊಡಬೇಕು. ದೇವದಾಸಿ ಮಹಿಳೆಯರಿಗೆ 1500 ಮಾಸಿಕ ಸಹಾಯಧನವನ್ನು ನೀಡುವಂತೆ ಹೋರಾಟಗಾರರು ಒತ್ತಾಯಿಸಿದರು. ಸಂಘದ ಅಧ್ಯಕ್ಷೆ ಎಚ್. ಪದ್ಮಾ, ಗೌರವಾಧ್ಯಕ್ಷ ಕೆ.ಜಿ. ವೀರೇಶ್ ಅನೇಕರಿದ್ದರು.