ಹೊರಗುತ್ತಿಗೆ ನೇಮಕ ರದ್ದತಿಗೆ ಆಗ್ರಹ
ರಾಯಚೂರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ವಸತಿ ನಿಲಯ ಮತ್ತು ವಸತಿಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಿಬ್ಬಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದವರೇ ಆಗಿದ್ದು, ಅಂತಹವರ ನೇಮಕದಲ್ಲಿ ಹೊರಗುತ್ತಿದೆ ಪದ್ಧತಿ ಅನುಸರಿಸುವುದು ಸರಿಯಲ್ಲ. ಕೂಡಲೇ ಸರ್ಕಾರ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 50 ಸಾವಿರ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರೂ ಗುತ್ತಿಗೆದಾರರಿಂದ ನಾನಾ ರೀತಿಯಲ್ಲಿ ಶೋಷಣೆಗೊಳಗಾಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರೇ ಶೋಷಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಆರೋಪಿಸಿದರು.
ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವವರಿಗೆ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತಿಲ್ಲ. ಭವಿಷ್ಯನಿಧಿ ಸೌಲತ್ತು ಸಮರ್ಪಕವಾಗಿ ದೊರೆಯುತ್ತಿಲ್ಲ. ವೇತನ ಕಡಿತ ತೀರಾ ಸಾಮಾನ್ಯವಾಗಿದೆ. ಪಿಎಫ್ ಕುರಿತ ಮಾಹಿತಿ ಸಂಬಂಧಿಸಿದ ನೌಕರರಿಗೆ ನೀಡುತ್ತಿಲ್ಲ ಎಂದು ದೂರಿದರು.
ಹೋರಾಟದ ಫಲ: ರಾಜ್ಯದಲ್ಲಿ ಹಾಸ್ಟೆಲ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನೇಕ ಬಾರಿ ಹೋರಾಟ ಮಾಡಲಾಗಿದೆ. ಅದರ ಫಲವಾಗಿ ಸರ್ಕಾರ ಕನಿಷ್ಠ ಸಂಬಳ, ಸವಲತ್ತುಗಳನ್ನು ಒದಗಿಸಲು ಒಪ್ಪಿ ಸುತ್ತೋಲೆ ಹೊರಡಿಸಿದ್ದರೂ ಅದರ ಜಾರಿಗೆ ಜಿಲ್ಲಾ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಟೀಕಿಸಿದರು.
ಉಲ್ಲಂಘನೆ: ಹೊರಗುತ್ತಿಗೆ ಆಧಾರದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾಯಂ ಸ್ವರೂಪದ ಕೆಲಸ ನಿರ್ವಹಿಸುತ್ತಿರುವವರ ಸೇವೆ ಕಾಯಂಗೆ ನ್ಯಾಯಾಲಯಗಳು ಆದೇಶ ನೀಡಿದ್ದರೂ ಅದರ ಜಾರಿ ಮಾತ್ರ ಆಗುತ್ತಿಲ್ಲ. ಅದರಿಂದಾಗಿ ನೌಕರರು ಇಂದಿಗೂ ಹೊರಗುತ್ತಿಗೆ ಆಧಾರದಲ್ಲಿಯೇ ಸೇವಾ ಭದ್ರತೆಯ ಕೊರತೆಯ ಮಧ್ಯೆ ಕಾರ್ಯನಿರ್ವಹಿಸುವಂತಾಗಿದೆ ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ರಾಮಣ್ಣ, ರುದ್ರೇಶ, ಹನುಮಂತು ಸೇರಿ ಅನೇಕರಿದ್ದರು.