ನೀರು ಪೋಲು ಪತ್ತೆ ಹಚ್ಚಿದ ಪಪಂ ಅಧ್ಯಕ್ಷ, ಸದಸ್ಯರು
ಮುದಗಲ್: ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಕೆಲ ದಿನಗಳಿಂದ ನೀರು ಸರಬರಾಜಿನಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಅದನ್ನು ಪತ್ತೆ ಹಚ್ಚುವಲ್ಲಿ ಪಟ್ಟಣ ಪಂಚಾಯ್ತಿ ಯಶಸ್ವಿಯಾಗಿದೆ.
ನವಲಿ ಬಳಿ ಇರುವ ಜಾಕ್‌ವೆಲ್‌ನಿಂದ ಮುದಗಲ್ ಪಟ್ಟಣಕ್ಕೆ 4.8 ಎಂಡಿಎಲ್ ಪ್ರಮಾಣದ ನೀರು ಸರಬರಾಜು ಆಗಬೇಕು. ಆದರೆ ಕೇವಲ 1.3 ಎಂಡಿಎಲ್ ನೀರು ಮಾತ್ರ ಪಟ್ಟಣಕ್ಕೆ ಸರಬರಾಜು ಆಗುತ್ತಿದ್ದರಿಂದ ನೀರು ಸೋರಿಕೆ ಎಲ್ಲಿ ಆಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಲು ಪಪಂ ಅಧ್ಯಕ್ಷ ರಜ್ಜಬಲಿ ಮತ್ತು ಸದಸ್ಯರಾದ ವೀರೇಶ ವಡ್ಡರ್, ಸಾದಿಕ್ ಅಲಿ, ವೀರಭದ್ರಪ್ಪ ಕೊಳ್ಳಿ, ಬಂದೇನವಾಜ, ಖಾಜಾಪಾಷಾ ಮುಂತಾದವರು ಕೆಡಬ್ಲ್ಯುಎಸ್ ಎಂಜಿನಿಯರ್‌ಗಳ ತಂಡವನ್ನು ಕರೆಯಿಸಿ ಪರಶೀಲಿಸಿದರು.
ನವಲಿಯಿಂದ ಕನ್ನಾಪುರಹಟ್ಟಿ ಜಲ ಶುದ್ಧೀಕರಣ ಘಟಕದವರೆಗೆ ಸರಿಯಾದ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿದೆ. ತದನಂತರ ಪಟ್ಟಣಕ್ಕೆ ಸರಬರಾಜು ಆಗುವ ಪೈಪ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡರು. ನಂತರ ಕನ್ನಾಪುರಹಟ್ಟಿ ಜವಾಹರ ನವೋದಯ ಶಾಲೆಗೆ ಇದೇ ಪೈಪ್‌ಲೈನ್ ಮೂಲಕ ನೀರು ಸರಬರಾಜು ಆಗುತ್ತಿದೆ ಎನ್ನುವುದನ್ನು ಅರಿತುಕೊಂಡ ಅಧ್ಯಕ್ಷರು, ಸದಸ್ಯರು ಜವಾಹರ ನವೋದಯ ವಿದ್ಯಾಲಯಕ್ಕೆ ತೆರಳಿ ಪರಿಶೀಲಿಸಿದಾಗ ನೀರು ದುರ್ಬಳಕೆಯಾಗುತ್ತಿರುವುದು ಗಮನಕ್ಕೆ ಬಂತು.
ವಾಗ್ಯುದ್ಧ: ಜವಾಹರ ನವೋದಯ ವಿದ್ಯಾಲಯದಲ್ಲಿ 400 ವಿದ್ಯಾರ್ಥಿಗಳು, 100 ಜನ ಸಿಬ್ಬಂದಿ ಸೇರಿ 500 ಜನರು ಮಾತ್ರ ವಾಸವಿದ್ದು, ಅಲ್ಲಿ ಪ್ರತಿ ದಿನಾಲು 8 ಲಕ್ಷ ಲೀಟರ್ ನೀರು ಇಲ್ಲಿಂದ ಪಡೆದುಕೊಳ್ಳುತ್ತಿರುವುದೇಕೆ ಎಂದು ಪ್ರಾನ್ಸಿಪಾಲರನ್ನು ಅಧ್ಯಕ್ಷ ರಜ್ಜಬಲಿ ಪ್ರಶ್ನಿಸಿದಾಗ, ಇಬ್ಬರ ನಡುವೆ ವಾಗ್ಯುದ್ಧ ನಡೆಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೆ 60 ಲೀಟರ್ ನೀರು ಪಡೆದರೂ 30 ಸಾವಿರ ಲೀಟರ್ ನೀರು ಸಾಕಾಗುತ್ತದೆ.
ಆದರೆ ಇಲ್ಲಿ 8 ಲಕ್ಷ ಲೀಟರ್ ನೀರನ್ನು ಪ್ರತಿದಿನ ಪಡೆಯುತ್ತಿದ್ದರಿಂದ ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ತಮಗೆ ಪ್ರತಿ ದಿನಾಲು 60 ಸಾವಿರ ಲೀಟರ್ ನೀರು ನೀಡುತ್ತೇವೆ. ಅದಕ್ಕಿಂತ ಹೆಚ್ಚಿಗೆ ನೀರು ಪಡೆದರೆ ನೀರು ಸರಬರಾಜು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಸ್ಥಳದಲ್ಲೇ ಇದ್ದ ಪ್ರಾನ್ಸಿಪಾಲರಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.