ವಿಶೇಷ ವರದಿ
ರಾಯಚೂರು: ಸ್ಥಳೀಯ ನಗರಸಭೆಯಲ್ಲಿ ಭುಗಿಲೆದ್ದಿರುವ ರಾಜಕೀಯ ಕಲಹ ಮತ್ತಷ್ಟು ವಿಕೋಪಕ್ಕೆ ತಿರುಗುವ ಲಕ್ಷಣವಿದೆ. ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉಪಾಧ್ಯಕ್ಷರು ಸಭೆಯ ದಿನಾಂಕ ಪ್ರಕಟಿಸಿದ್ದು, ಅವಿಶ್ವಾಸದಿಂದ ಪಾರಾಗಲು ಹಾಲಿ ಅಧ್ಯಕ್ಷರು ಶತಾಯಗತಾಯ ಪ್ರಯತ್ನ ಆರಂಭಿಸಿದ್ದಾರೆ. ಇದರ ಭಾಗವಾಗಿ ಪೌರಾಡಳಿತ ಸಚಿವರ ಭೇಟಿಗೂ ಮುಂದಾಗಿದ್ದು ಕುತೂಹಲ ಕೆರಳಿಸಿದೆ.
ರಾಯಚೂರಿನ ನಗರಸಭೆ ಎಂದಿನಿಂದಲೂ ಸಭೆಗಳಲ್ಲಿ ಕಿತ್ತಾಟ, ರಾಜಕೀಯ ಕಲಹಕ್ಕೆ ಹೆಸರುವಾಸಿ. ಹಾಗಾಗಿ ಈಗಲೂ ನಗರದ ಜನತೆಗೆ ನಗರಸಭೆಯಲ್ಲಿ ಅಂಥದ್ದೇ ಸಾಲು ಸಾಲು ಬೆಳವಣಿಗೆಗಳು ಕಂಡುಬರುತ್ತಿವೆ. ನಗರದ ಸಮಸ್ಯೆಗಳು ಗೌಣವಾಗಿದ್ದು, ಅಧ್ಯಕ್ಷೆ ಮಹಾದೇವಿ ನಾಯಕ ಮತ್ತು ಅವರ ವಿರೋಧಿಗಳ ಗುಂಪಿನ ಮೇಲಾಟಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ.
ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್.ಎನ್. ನಾಗರಾಜು ಅವರಿಗೆ ನಗರಸಭೆಯ 30 ಸದಸ್ಯರು ಅವಿಶ್ವಾಸ ಅರ್ಜಿ ಸಲ್ಲಿಕೆಯಿಂದ ಆರಂಭಗೊಂಡ ಪ್ರಹಸನ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ.
ಆರೋಪಗಳಿಗೆ ಸ್ಪಷ್ಟನೆ: ಅಧ್ಯಕ್ಷೆ ಮಹಾದೇವಿ ನಾಯಕ ಅವರು ಸದಸ್ಯರ ಅವಿಶ್ವಾಸ ಅರ್ಜಿ ವಿರುದ್ಧ ಡಿಸಿಗೆ ಮೌನ ಮೆರವಣಿಗೆ ನಡೆಸಿ ದೂರು ಸಲ್ಲಿಸಿದ ನಂತರ ಆಗಿನ ಡಿಸಿ ನಾಗರಾಜು ನಗರಸಭೆಯ ಕಡತ ಮತ್ತು ಸಾಮಾನ್ಯ ಸಭೆಯ ಠರಾವು ಪುಸ್ತಕ ವಶಕ್ಕೆ ಪಡೆದು ಪರಿಶೀಲಿಸಿದರು. ಅಧ್ಯಕ್ಷರು ಜಿಲ್ಲಾಡಳಿತಕ್ಕೆ ಸದಸ್ಯರ ವರ್ತನೆಗೆ ಸಂಬಂಧಿಸಿ ವ್ಯಕ್ತಪಡಿಸಿದ್ದ ಅನುಮಾನಗಳ ಬಗ್ಗೆ ಸದಸ್ಯರೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಆರೋಪಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದರು.
ಅಂತೆಯೇ ಜಿಲ್ಲಾಧಿಕಾರಿಗಳು ಕೆಲವು ನಿರ್ದೇಶನಗಳೊಂದಿಗೆ ನಗರಸಭೆಯ ದಾಖಲೆಗಳನ್ನು ಮರಳಿಸಿದ್ದಾರೆ. ಅದರಿಂದಾಗಿ ಅವಿಶ್ವಾಸ ಸಭೆ ಕರೆಯಲು ಅಧ್ಯಕ್ಷರ ವಿರೋಧಿ ಗುಂಪು ಸಜ್ಜಾಗಿದ್ದು, ಆತಂಕಗೊಂಡಿರುವ ಅಧ್ಯಕ್ಷೆ ಮಹಾದೇವಿ ನಾಯಕ ಅವರು ಪೌರಾಡಳಿತ ಸಚಿವರನ್ನು ಜು.7ರಂದು ಭೇಟಿ ಮಾಡಿ ನಗರಸಭೆಯಲ್ಲಿ ಎದ್ದಿರುವ ಗೊಂದಲಕ್ಕೆ ಸಂಬಂಧಿಸಿ ಮಾಹಿತಿ ನೀಡಲು ನಿರ್ಧರಿಸಿದ್ದಾರೆ.
ಸರ್ಕಾರ ನಿಗದಿ ಮಾಡಿದ ಮೀಸಲಾತಿಯಂತೆ ತಾವು ಅಧ್ಯಕ್ಷರಾಗಿದ್ದು, ಸದಸ್ಯರು ತಮಗೆ ಮತ ನೀಡಿ ಆಯ್ಕೆ ಮಾಡಿಲ್ಲ. ಅಧಿಕಾರ ನಡೆಸಲು ಅಸಮರ್ಥರು ಎಂದು ಆರೋಪಿಸಿ ಅವಿಶ್ವಾಸಕ್ಕೆ ಮುಂದಾಗಿರುವುದು ಸದಸ್ಯರ ಪರಮಾಧಿಕಾರದ ಅಪಹಾಸ್ಯವಾಗಿದೆ. ಸದಸ್ಯರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪದ ಬಗ್ಗೆ ಸರ್ಕಾರದ ಗಮನ ಸೆಳೆದು ವಿರೋಧಿಗಳ ಬಾಯಿ ಮುಚ್ಚಿಸುವ ತಂತ್ರಕ್ಕೆ ಮುಂದಾಗಲು ನಿರ್ಧರಿಸಿದ್ದಾರೆ.
ಜು.7ರಂದು ಪೌರಾಡಳಿತ ಸಚಿವರನ್ನು ನಿಯೋಗದಲ್ಲಿ ತೆರಳಿ ಮನವಿ ಮಾಡಲು ಅವರು ನಿರ್ಧರಿಸಿದ್ದು, ಇದರಿಂದ ನಗರಸಭೆಯಲ್ಲಿ ರಾಜಕೀಯ ಮತ್ತಷ್ಟು ಕಾವೇರಿದೆ. ಈ ಮಧ್ಯೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದ ಸದಸ್ಯರು ಅಧ್ಯಕ್ಷೆ ಮಹಾದೇವಿ ನಾಯಕ ಅವರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಲು ನಿಗದಿತ ಸಮಯದಲ್ಲಿ ಆಸಕ್ತಿ ತೋರದ ಕಾರಣಕ್ಕೆ ಉಪಾಧ್ಯಕ್ಷರನ್ನು ಸಭೆ ಕರೆಯಲು ಒತ್ತಾಯಿಸಿದ್ದಾರೆ.
ಹಾಗಾಗಿ ಉಪಾಧ್ಯಕ್ಷೆ ಪದ್ಮಾವತಿ ಅವರು ಜು.14ಕ್ಕೆ ಅವಿಶ್ವಾಸ ಸಭೆ ಕರೆಯಲು ಮುಂದಾಗಿದ್ದು, ಅಧ್ಯಕ್ಷರು ಸರ್ಕಾರದ ಮಟ್ಟದಲ್ಲಿ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಲು ಮುಂದಡಿಯಿಡುವಂತೆ ಮಾಡಿದೆ. ಅಷ್ಟೇ ಅಲ್ಲ ಸರ್ಕಾರದ ಗಮನ ಸೆಳೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಕ್ಕೆ ಸಜ್ಜಾಗಿದ್ದಾರೆಂದು ಗೊತ್ತಾಗಿದೆ.