ತೆಲಂಗಾಣ-ಸೀಮಾಂಧ್ರ ರೈತರ ವಾಗ್ಯುದ್ಧ
ರಾಯಚೂರು: ಆಂಧ್ರಪ್ರದೇಶವು ಪ್ರತ್ಯೇಕ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಾಗಿ ವಿಂಗಡಣೆಯಾಗುತ್ತಿದ್ದಂತೆ ಉಭಯ ರಾಜ್ಯಗಳ ರೈತರ ಮಧ್ಯೆ ನೀರಿಗಾಗಿ ಜಗಳ ಆರಂಭಗೊಂಡಿದೆ. ಮಾನವಿ ತಾಲೂಕಿನ ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆ(ಆರ್‌ಡಿಎಸ್)ಯ ನೀರಿಗಾಗಿ ಭಾನುವಾರ ಎರಡೂ ಭಾಗದ ರೈತರ ಮಧ್ಯೆ ವಾಗ್ಯುದ್ಧ ನಡೆದಿದೆ.
ಆರ್‌ಡಿಎಸ್‌ನ ಆಧುನೀಕರಣ ಕಾಮಗಾರಿ ಕೈಗೊಂಡ ವಿಚಾರವೇ ಗೊಂದಲಕ್ಕೆ ದಾರಿ ಮಾಡಿದ್ದು, ಅಣೆಕಟ್ಟೆ ಬಳಿ ಸೀಮಾಂಧ್ರ ರೈತರು ಜಮಾಯಿಸಿ ಕಾಮಗಾರಿಗೆ ತಡೆಯೊಡ್ಡಿದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ತೆಲಂಗಾಣ ರೈತರೊಂದಿಗೆ ವಾಗ್ಯುದ್ಧ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ತೆಲಂಗಾಣ ರಾಜ್ಯ ಉದಯವಾಗುವವರೆಗೆ ಕರ್ನಾಟಕ- ಆಂಧ್ರದ ಜಂಟಿ ಯೋಜನೆಯಾಗಿದ್ದ ಆರ್‌ಡಿಎಸ್, ಈಗ ಮೂರು ರಾಜ್ಯಗಳ ಯೋಜನೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಜಿದ್ದಾಜಿದ್ದಿ ರಾಜಕೀಯಕ್ಕೆ ಹೆಸರಾದ ತೆಲಂಗಾಣ ಮತ್ತು ಸೀಮಾಂಧ್ರ ಭಾಗದ ರೈತರು ಮಾತ್ರ ಅಣೆಕಟ್ಟೆಯಿಂದ ನೀರು ಪಡೆಯುತ್ತಿದ್ದು, ಇದು ಕರ್ನಾಟಕಕ್ಕೆ ಸದ್ಯ ತಲೆನೋವಾಗಿ ಪರಿಣಮಿಸಿದೆ.
ಕಾಮಗಾರಿಗೆ ತಡೆ: ಕಳೆದ ಮೂರು ವರ್ಷಗಳ ಹಿಂದೆಯೇ ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆಯ ಆಧುನೀಕರಣ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ವರ್ಷ ಗುತ್ತಿಗೆದಾರರಿಗೆ ಕಾಮಗಾರಿ ಕೈಗೊಳ್ಳಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಕಾಮಗಾರಿ ಕೈಗೊಂಡಿದ್ದರು. ಇದನ್ನು ಸೀಮಾಂಧ್ರ ಭಾಗದ ರೈತರು ಅಣೆಕಟ್ಟೆ ಎತ್ತರ ಹೆಚ್ಚಿಸಲಾಗುತ್ತಿದೆ ಎಂದು ತಪ್ಪಾಗಿ ಭಾವಿಸಿ ಮಂತ್ರಾಲಯಂ ಶಾಸಕ ಬಾಲನಾಗಿರೆಡ್ಡಿ ನೇತೃತ್ವದಲ್ಲಿ ನೂರಾರು ವಾಹನಗಳಲ್ಲಿ ಅಣೆಕಟ್ಟೆ ಸ್ಥಳಕ್ಕೆ ಧಾವಿಸಿದರು. ಗುತ್ತಿಗೆದಾರರಿಗೆ ಕಾಮಗಾರಿ ಕೈಗೊಳ್ಳದಂತೆ ತಾಕೀತು ಮಾಡಿದ್ದಾರೆ.
ವಾಗ್ವಾದ: ಈ ವೇಳೆ ತೆಲಂಗಾಣ ರೈತರು ಸೀಮಾಂಧ್ರದ ರೈತರೊಂದಿಗೆ ವಾಗ್ವಾದಕ್ಕಿಳಿದು ಆತಂಕ ಸೃಷ್ಟಿಸಿತ್ತು. ಗುತ್ತಿಗೆದಾರರು ನೀರಾವರಿ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು ಅಲ್ಲಿಂದ ಮಾನವಿ ಪೊಲೀಸರು, ಸೀಮಾಂಧ್ರದ ಕೋಸಿಗಿ ಠಾಣೆಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಎರಡೂ ರಾಜ್ಯಗಳ ರೈತರಿಗೆ ವಾಸ್ತವಾಂಶ ಮನವರಿಕೆ ಮಾಡುವ ಕಾರ್ಯ ಮಾಡಿದರು.
ಅಧಿಕಾರಿಗಳು 2009ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಅಣೆಕಟ್ಟೆಯು ಅಲ್ಲಲ್ಲಿ ಶಿಥಿಲಗೊಂಡಿದ್ದು ಅದರ ದುರಸ್ತಿ ಕಾರ್ಯ ಕೈಗೊಳ್ಳುತ್ತಿದೆಯೇ ವಿನಾ ಬೇರಾವುದೇ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂದು ತೆಲಂಗಾಣ ಮತ್ತು ಸೀಮಾಂಧ್ರ ಭಾಗದ ರೈತರಿಗೆ ಮಾಹಿತಿ ನೀಡಿದ ನಂತರ ಪರಿಸ್ಥಿತಿ ತಿಳಿಗೊಂಡಿತೆಂದು ಪೊಲೀಸ್ ಮೂಲಗಳು ತಿಳಿಸಿವೆ.