ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಸಭೆ ಅಗತ್ಯ
ದೇವದುರ್ಗ: ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಸಭೆ ಸಹಕಾರಿಯಾಗಿದ್ದು, ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆಂದು ಶಾಸಕ ವೆಂಕಟೇಶ ನಾಯಕ ಹೇಳಿದರು.
ತಾಲೂಕಿನ ಮುಂಡರಗಿಯಲ್ಲಿ ತಾಲೂಕು ಆಡಳಿತದಿಂದ ಇತ್ತೀಚೆಗೆ ಆಯೋಜಿಸಿದ್ದ ಜನ ಸ್ಪಂದನ ಸಭೆ ಉದ್ಘಾಟಿಸಿ ಮಾತನಾಡಿ, ಸಭೆ ಆಯೋಜನೆಯಿಂದ ಗ್ರಾಮೀಣ ಭಾಗದ ಜನತೆ ತಮ್ಮ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಆಗಮಿಸುವ ಅನಿವಾರ್ಯತೆ ತಪ್ಪಿದೆ. ಈಗಾಗಲೇ ಜಾಲಹಳ್ಳಿ ಹೋಬಳಿ ಮಟ್ಟದಲ್ಲಿ ಮದುವೆ ಆಗದೆ ಇರುವ ಮಹಿಳೆಯರಿಗೆ ಮನಸ್ವಿನಿ ಯೋಜನೆ ಅಡಿ 7 ಜನರಿಗೆ ಮಾಸಾಶನ ಹಾಗೂ ಐವರು ವಿಕಲಚೇತನರಿಗೆ ಸೇರಿ ಒಟ್ಟು 423 ಜನರಿಗೆ ವಿವಿಧ ಮಾಸಾಶನ ನೀಡಲಾಗಿದೆ ಎಂದರು.
ಸಭೆಯಲ್ಲಿ ಸಂಸದ ಬಿ.ವಿ. ನಾಯಕ ಮಾತನಾಡಿದರು. ಜಿಪಂ ಸದಸ್ಯ ಶಿವಣ್ಣ ತಾತಾ ಮುಂಡರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಗ್ರಾಪಂ ಸದಸ್ಯ ಗ್ವಾಲಪ್ಪ, ಪ್ರಭಾರಿ ತಹಸೀಲ್ದಾರ್ ಹುಸೇನಪ್ಪ, ತಾಪಂ ಇಒ ಬಿ.ಬಿ. ಕುಲಕರ್ಣಿ, ಜಿಪಂ ಎಇಇ ವೆಂಕಟೇಶ ಗಲಗ, ಪ್ರಭಾರಿ ಸಿಡಿಪಿಒ ಯಮನಪ್ಪ ವಾಲ್ಮೀಕಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ ರೇಬಿನಾಳ ಸೇರಿದಂತೆ ಅನೇಕರಿದ್ದರು.