ಜಿಲ್ಲಾಡಳಿತಕ್ಕೇ ಚಳ್ಳೆಹಣ್ಣು ತಿನಿಸಿದ ನಕಲಿ ಐಎಎಸ್ ಅಧಿಕಾರಿ, ಸಹಚರರ ಬಂಧನ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 8
2007ರ ಐಎಎಸ್ ಅಧಿಕಾರಿ ಎಂದು ಶಿಷ್ಟಾಚಾರದಂತೆ ಜಿಲ್ಲಾಡಳಿತದ ಸಕಲ ಆದರಾತಿಥ್ಯವನ್ನೂ ಪಡೆದು ನಿರುದ್ಯೋಗಿಗಳಿಗೆ ನೌಕರಿ ಕೊಡಿಸುವ ಭರವಸೆ ನೀಡಿ ವಂಚಿಸುತ್ತಿದ್ದ ನಕಲಿ ಐಎಎಸ್ ಅಧಿಕಾರಿ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 15.42 ಲಕ್ಷ ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ದೆಹಲಿಯ ನಿವಾಸಿ, ಮುಂಬೈ ಮೂಲದ ನಕಲಿ ಐಎಎಸ್ ಅಧಿಕಾರಿ ಕಬೀರ್ ಹಾಷ್ಮಿ ಅಲಿಯಾಸ್ ಸೈಯದ್ ಅನ್ವರ್ ಹಾಷ್ಮಿ, ಸಹಚರ ಬಿಹಾರ್ ಮೂಲದ ಸರ್ವೇಶಕುಮಾರ್ ಮತ್ತು ರಾಯಚೂರಿನ ಜಲಾಲ್ ನಗರದ ಉಬೇದುಲ್ಲಾ ಎಂದು ಗುರುತಿಸಲಾಗಿದೆ.
ಹೀಗಿದೆ ಕರಾಮತ್ತು: ನಗರದ ಜಿಲ್ಲಾಡಳಿತಕ್ಕೆ ಜು.5ರಂದು ಸಂಜೆ 5ಕ್ಕೆ ದೆಹಲಿಯಿಂದ ಫ್ಯಾಕ್ಸ್ ಸಂದೇಶ ಬಂದಿದ್ದು, ಅದರಲ್ಲಿ ಜು.7 ರಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಉಪಕಾರ್ಯದರ್ಶಿಯಾಗಿರುವ ಕಬೀರ್ ಹಾಷ್ಮಿ ಎಂಬವರು ರಾಯಚೂರಿಗೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಅವರ ಪಿಎ ಸರ್ವೇಶಕುಮಾರ್ ಎಂಬುವವರೂ ಆಗಮಿಸಲಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಅಂತೆಯೇ ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಅತಿಥಿಗಳಿಗೆ ಒದಗಿಸುವ ಜಿಲ್ಲಾಡಳಿತದ ಕಾರು ಹಾಗೂ ಸಿಬ್ಬಂದಿಯನ್ನು ಜು.7ರಂದು ದೆಹಲಿಯಿಂದ ಆಗಮಿಸುವ ಕೆಕೆ ಎಕ್ಸ್‌ಪ್ರೆಸ್ ರೈಲಿನ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣಕ್ಕೆ ಕಳುಹಿಸಿದೆ. ರೈಲಿನಿಂದಿಳಿದ ಕಬೀರ್ ಹಾಷ್ಮಿ ನೇರವಾಗಿ ಪ್ರವಾಸಿ ಬಂಗಲೆಗೆ ತೆರಳಿದ್ದಾರೆ. ಆನಂತರ ಕಬೀರ್ ನೇರವಾಗಿ ನಗರದ ನೆಹರು ಯುವಕೇಂದ್ರಕ್ಕೆ ತೆರಳಿದ್ದಾನೆ.
ನೆಹರು ಯುವ ಕೇಂದ್ರದಲ್ಲಿನ ಸೌಲಭ್ಯಗಳ ಕೊರತೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿ ಪ್ರಭಾರಿ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಅವರನ್ನು ಭೇಟಿ ಮಾಡಲು ಸರ್ಕಾರಿ ವಾಹನದಲ್ಲಿಯೇ ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಜಿಲ್ಲಾಧಿಕಾರಿಯನ್ನು ಕಂಡು ಮಾತುಕತೆ ನಡೆಸಿದ್ದಾನೆ.
ಪ್ರಭಾರಿ ಡಿಸಿಗೆ ಅನುಮಾನ: ಈ ವೇಳೆ ಕಬೀರ್ ಹಾಷ್ಮಿ ತಾನು 2007ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ರಶ್ಮಿ ಎಂಬ ಮತ್ತೊಬ್ಬ ಐಎಎಸ್ ಅಧಿಕಾರಿ ಸಹ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿ ಅಲ್ಲಿಂದ ಮರಳಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಪ್ರಭಾರಿ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಅವರು ಐಎಎಸ್ ತರಬೇತಿ ವೇಳೆ ತಮ್ಮ ಸಹಪಾಠಿಯಾಗಿದ್ದ ರಶ್ಮಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಆಗಲೇ ಕಬೀರ್ ಹಾಷ್ಮಿ ಒಬ್ಬ ನಕಲಿ ಐಎಎಸ್ ಅಧಿಕಾರಿ ಎಂಬುದು ಖಾತರಿಯಾಗಿದೆ.ಅದೇ ರೀತಿ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಚೇರಿಗೂ ಸಂಪರ್ಕಿಸಿ ಮಾಹಿತಿ ಕೇಳಲಾಗಿ ಅಲ್ಲಿಯೂ ಅಂಥ ಯಾವುದೇ ಅಧಿಕಾರಿಯಿಲ್ಲ ಎಂಬುದು ಸ್ಪಷ್ಟವಾಗಿದೆ.
ಪೊಲೀಸರಿಂದ ವಿಚಾರಣೆ: 2007ರ ಬ್ಯಾಚಿನ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಕಬೀರ್ ಎಂಬಾತ ಇಲ್ಲವೇ ಇಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಪೊಲೀಸರು ಜಿಲ್ಲಾಧಿಕಾರಿಗಳ ದೂರಿನ ಮೇರೆಗೆ ಪ್ರವಾಸಿ ಬಂಗಲೆ ಮೇಲೆ ದಾಳಿ ಮಾಡಿ ನಕಲಿ ಐಎಎಸ್ ಅಧಿಕಾರಿ ಕಬೀರ್ ಹಾಷ್ಮಿ, ಆತನ ಪಿಎ ಸರ್ವೇಶಕುಮಾರ್ ಹಾಗೂ ರಾಯಚೂರಿನ ನಿವಾಸಿ ಉಬೇದುಲ್ಲಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಂಚನೆ ಬಯಲು: ವಿಚಾರಣೆ ವೇಳೆ ಕಬೀರ್ ಹಾಷ್ಮಿ ಒಬ್ಬ ನಕಲಿ ಐಎಎಸ್ ಅಧಿಕಾರಿಯಾಗಿದ್ದು, ಆತ ಈ ಹಿಂದೆಯೂ ನಗರಕ್ಕೆ ಆಗಮಿಸಿ ಇದೇ ರೀತಿ ಜಿಲ್ಲಾಡಳಿತದ ಆದರಾತಿಥ್ಯ ಪಡೆದು ಮರಳಿದ್ದು ಗೊತ್ತಾಗಿದೆ. ಅಷ್ಟೇ ಅಲ್ಲ ನಿರುದ್ಯೋಗಿಗಳಿಂದ ಲಕ್ಷಾಂತರ ರು. ಪಡೆದು ಉದ್ಯೋಗದ ಭರವಸೆ ನೀಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ.
ಬಂಧಿತ ಆರೋಪಿಗಳಿಂದ 15.42 ಲಕ್ಷ ಜಪ್ತಿ ಮಾಡಲಾಗಿದೆ. ನಗರದ ಉಬೇದುಲ್ಲಾ ಮತ್ತು ಆತನ ಸಂಬಂಧಿ ವಕೀಲರೊಬ್ಬರ ಮೂಲಕ ಈ ಅಕ್ರಮ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಂಚನೆಯ ಜಾಲ ಮತ್ತಷ್ಟು ಹರಡಿಕೊಂಡಿರುವ ಸಾಧ್ಯತೆಯಿದ್ದು ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದಾರೆಂದು ತಿಳಿಸಿದರು.