ವೀರಭದ್ರೇಶ್ವರ ಮೂರ್ತಿ ಕಳ್ಳತನ
ಮುದಗಲ್: ಸಮೀಪದ ತಲೇಖಾನ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿನ ಮೂರ್ತಿ ಕಳ್ಳತನವಾಗಿರುವ ಪ್ರಕರಣ ಶುಕ್ರವಾರ ತಡರಾತ್ರಿ ಜರುಗಿದೆ. ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವರ ಮೂರ್ತಿಗೆ ಕನ್ನ ಹಾಕಿರುವ ಕಳ್ಳರು, ಶುಕ್ರವಾರ ರಾತ್ರೋರಾತ್ರಿ ದೇವರ ಮೂರ್ತಿ ಸಮೇತ ಪರಾರಿಯಾಗಿದ್ದಾರೆ. ಶನಿವಾರ ಬೆಳಗಿನ ಜಾವ ದೇವಸ್ಥಾನಕ್ಕೆ ಬಂದ ಅರ್ಚಕ ದೇವರ ಮೂರ್ತಿ ನಾಪತ್ತೆಯಾಗಿರುವುದನ್ನು ಗಮನಿಸಿ ಗ್ರಾಮದ ಮುಖಂಡರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮದ ಮುಖಂಡರು ಸೇರಿ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನದಳ ಸಮೇತ ಗ್ರಾಮಕ್ಕೆ ಆಗಮಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.